ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ದಿನೇ ದಿನೇ ರೋಚಕತೆ ಪಡೆಯುತ್ತಿದೆ. ಕೊಲೆ ಮಾಡಿದವರು ಮೊದಲು ನಾಲ್ವರು ಎನ್ನುತ್ತಿದ್ದರು. ಆದ್ರೆ ಈಗ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಕೊಲೆ ಪ್ರಕರಣ ಸಂಬಂಧ ಇಂದು ಅಬ್ದುಲ್ ಖಾದರ್ ಜಿಲಾನಿ(25) ಹಾಗೂ ಫರಾಜ್ ಪಾಷಾ(24) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರು ಕೊಲೆ ಮಾಡಿದ ಆರು ಜನ ಆರೋಪಿಗಳಿಗೆ ಸಹಾಯ ಮಾಡಿದ್ದಕ್ಕೆ ಬಂಧಿಸಲಾಗಿದೆ. ಜಿಲಾನಿ ಕಾರು ತಂದಿದ್ದರೆ, ಫರಾಜ್ ಪಾಷಾ ಕಾರು ಚಾಲಕನಾಗಿ ಕಾರ್ಯನಿರ್ವಹಿಸಿದ್ದ. ಕಾರು ಹೋದ ಬಗ್ಗೆ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿ ಬಂಧಿಸಲಾಗಿದೆ. ಈಗಾಗಲೇ ಕೊಲೆ ನಡೆದ ರಾತ್ರಿಯೇ ಖಾಸಿಫ್ ಹಾಗೂ ನದೀಮ್ ರನ್ನು ಬಂಧಿಸಿದ್ದ ಪೊಲೀಸರು, ನಂತರ ವಿಚಾರಣೆಯ ವೇಳೆ ರಿಹಾನ್ ಶರೀಫ್, ಆಸಿಫ್ ಉಲ್ಲಾ ಖಾನ್, ಅಬ್ದುಲ್ ಅಫ್ನಾನ್ , ನಿಹಾನ್ ರನ್ನು ಬಂಧಿಸಿದ್ದರು.
ಈಗಾಗಲೇ ಖಾಸಿಫ್ ಹಾಗೂ ನದೀಮ್ ರನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರೀಗ ಜೈಲಿನಲ್ಲಿದ್ದಾರೆ. ಇಂದು ಎ-3 ಯಿಂದ ಎ-6 ಆರೋಪ ಪಟ್ಟಿಯಲ್ಲಿರುವವರನ್ನ ಶಿವಮೊಗ್ಗ ಜಿಲ್ಲಾ ಎರಡನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಇವರಿಗೆ 14 ದಿನಗಳ ಕಾಲ ಅಂದ್ರೆ ಮಾರ್ಚ್ 3 ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಇಂದು ಇಬ್ಬರ ಬಂಧನವಾಗಿದ್ದು, ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಪತ್ತೆಯಾದ ಮೃತ ಹರ್ಷನ ಮೊಬೈಲ್ :ಬುಧವಾರ ಬೆಳಗ್ಗೆ ಮೃತ ಹರ್ಷನ ಸ್ನೇಹಿತ ಹರ್ಷ ಕೊಲೆಯಾದ ವೇಳೆ ಆತನಿಗೆ ಹುಡುಗಿಯರು ನಿಮ್ಮ ಸಹಾಯ ಬೇಕು ಎಂದು ಹೇಳಿ ವಿಡಿಯೋ ಕಾಲ್ ಮಾಡಿದ್ದರ ಬಗ್ಗೆ ತಿಳಿಸಿದ್ದರು. ಇದರಿಂದ ಪೊಲೀಸರು ಈಗ ಹರ್ಷನ ಮೊಬೈಲ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಮೊಬೈಲ್ ಪತ್ತೆಯಾಗಿರುವ ಕಾರಣ ಅಂದು ಯಾರ್ಯಾರು ಫೋನ್ ಮಾಡಿದ್ದರು, ಮತ್ತು ಬೆದರಿಕೆಯ ಮೆಸ್ಸೇಜ್ ಮಾಡಿದ್ದಾರೆ ಎಂಬ ಮಾಹಿತಿಯ ಜೊತೆಗೆ ಅಂದು ವಿಡಿಯೋ ಕಾಲ್ ಯಾರು ಮಾಡಿದ್ದರು ಎಂಬ ಅಂಶ ತಿಳಿದು ಬರಲಿದೆ.
ಹಣ ನೀಡಿ ಕೊಲೆಗೆ ಸುಪಾರಿ..?ಹರ್ಷ ಬಜರಂಗದಳದ ಕೋಟೆ ಪ್ರಖಂಡ ಭಾಗದ ಪ್ರಮುಖನಾಗಿದ್ದ. ಈತ ಫೇಸ್ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೊಸ್ಟ್ ಹಾಕಿದ್ದ ಎಂದು 2016 ಹಾಗೂ 2017 ರಲ್ಲಿ ಈತನ ವಿರುದ್ಧ ಎರಡು ಕೇಸ್ ಫೈಲ್ ಆಗಿದ್ದವು. ನಂತರ ಈತನಿಗೂ ಕ್ಲಾರ್ಕ್ ಪೇಟೆಯ ಹುಡುಗರಿಗೂ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಇದನ್ನೇ ಬಳಸಿಕೊಂಡು ಈಗ ಕೊಲೆ ಮಾಡಿರುವ ಆರೋಪಿಗಳಿಗೆ ಹಣ ನೀಡಿ ಕೊಲೆ ಮಾಡಿಸಲಾಗಿದೆ ಎನ್ನಲಾಗುತ್ತಿದೆ. ಕೊಲೆ ಮಾಡಲು ಸ್ಕೆಚ್ ಸಹ ಹಾಕಿಕೊಡಲಾಗಿದೆ. ಫೋನ್ ಮಾಡಿ ಮನೆಯಿಂದ ಕರೆಯಿಸಿ, ಕೊಲೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಸಿಸಿಬಿ ಜಂಟಿ ಆಯುಕ್ತ ರಮಣ ಗುಪ್ತಾ ಎಂಟ್ರಿ:ಶಿವಮೊಗ್ಗ ನಗರಕ್ಕೆ ಸಿಸಿಬಿ ಜಂಟಿ ಆಯುಕ್ತ ರಮಣ ಗುಪ್ತಾ ಆಗಮಿಸಿದ್ದಾರೆ. ಎಡಿಜಿಪಿ ಮುರುಗನ್ ಬೆಂಗಳೂರಿಗೆ ವಾಪಸ್ ಆದ ಕಾರಣ ರಮಣ ಗುಪ್ತಾರನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ರಮಣ ಗುಪ್ತಾ ಶಿವಮೊಗ್ಗದಲ್ಲಿ ಹಿಂದೆ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.