ಶಿವಮೊಗ್ಗ:ಲಂಬಾಣಿ ಸಮಾಜದ ಗೋರ್ ಸಿಕವಾಡಿ ಎಂಬ ಸಾಮಾಜಿಕ ಚಳವಳಿಯ ನೆನಪಿಗಾಗಿ ಕೊಪ್ಪಳ ಜಿಲ್ಲೆಯ ಬಹುದ್ದೂರ್ ಬಂಡಾದಲ್ಲಿ ಅ.12 ಮತ್ತು 13ರಂದು ಎರಡು ದಿನಗಳ ರಾಷ್ಟ್ರೀಯ ಗೋರ್ ಮಿಳಾವ್ ಎಂಬ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಗೋರ್ ಮಿಳಾವಿನ ಜಿಲ್ಲಾ ಸಂಚಾಲಕ ನಾಗೇಂದ್ರ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗೇಂದ್ರ ನಾಯಕ್, ಲಂಬಾಣಿ ತಾಂಡಾಗಳಲ್ಲಿ ಜೀವಿಸುತ್ತಿರುವ ಬಂಜಾರರಿಗೆ ಹಲವು ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿದ್ದು, ಭಾಷೆ, ಸಂಸ್ಕೃತಿ, ಉಡುಗೆ, ತೊಡುಗೆ, ಆಚಾರ ವಿಚಾರಗಳಿಂದ ವಿಮುಖರಾಗುತ್ತಿದ್ದಾರೆ. ಸಂಪ್ರದಾಯಗಳು ಮರೆಯಾಗುತ್ತಿವೆ. ಇವುಗಳನ್ನು ಉಳಿಸಲು ಗೊರ್ ಸಿಕಾವಾಡಿ ಎಂಬ ರಾಜಕೀಯೇತರ ಸಾಮಾಜಿಕ ಚಳವಳಿ ಹುಟ್ಟುಕೊಂಡಿದ್ದು, ಜನಾಂಗದ ಸಂಸ್ಕೃತಿ ರಕ್ಷಣೆಗಾಗಿ ಈ ಚಳವಳಿ ಶ್ರಮಿಸುತ್ತಿದೆ. ಸಮಾಜದ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆಯೆಂದು ಮಾಹಿತಿ ನೀಡಿದರು.