ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಜಿಲ್ಲೆಯ ಜೀವನಾಡಿ ತುಂಗಾ ನದಿಗೆ ತುಂಗಾರತಿ ಮಾಡಲಾಯಿತು. ಇಲ್ಲಿನ ಕೊರ್ಪಲಯ್ಯನ ಛತ್ರದ ಬಳಿ ಇರುವ ತುಂಗಾ ಮಂಟಪದಲ್ಲಿ ತುಂಗಾರತಿ ಜರುಗಿತು. ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ದಸರಾ ಮಹೋತ್ಸವದ ಅಂಗವಾಗಿ ತುಂಗಾರತಿ ಪೂಜೆ ನೆರವೇರಿತು.
ದಕ್ಷಿಣದಲ್ಲಿ ತುಂಗಾರತಿ: ಗಂಗಾ ಸ್ನಾನ ತುಂಗಾ ಪಾನ ಎಂಬ ಗಾದೆ ಮಾತಿದೆ. ಅದೇ ರೀತಿ ತುಂಗಾ ನದಿ ನೀರು ಅತ್ಯಂತ ಸಿಹಿ ಆಗಿರುತ್ತದೆ ಎಂಬ ಮಾತಿದೆ. ಉತ್ತರದಲ್ಲಿ ಗಂಗಾ ನದಿಗೆ ಗಂಗಾರತಿ ನಡೆಸಲಾಗುತ್ತದೆ. ಅದೇ ರೀತಿ ಶಿವಮೊಗ್ಗದಲ್ಲಿ ತುಂಗಾರತಿ ನೆರವೇರಿಸಲಾಯಿತು. ತುಂಗಾ ನದಿ ಮಂಟಪದ ಮೇಲೆ ಐವರು ಋಗ್ವಿಜರು ತುಂಗೆಗೆ ಆರತಿ ಎತ್ತಲು ತಯಾರಾಗುತ್ತಿದ್ದಂತೆಯೇ ವರುಣನ ಆಗಮನವಾಯಿತು. ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ದಂಪತಿ ಸಮೇತ ತುಂಗರಾತಿ ಮಾಡಿದರು. ನಂತರ ಉಪಮೇಯರ್, ಪರಿಸರ ದಸರಾದ ಅಧ್ಯಕ್ಷರಾದ ಮೀನಾಕ್ಷಿ ಗೋವಿಂದರಾಜು ಸೇರಿದಂತೆ ಪಾಲಿಕೆಯ ಎಲ್ಲಾ ಸದಸ್ಯರು ತುಂಗಾರಾತಿಯಲ್ಲಿ ಭಾಗಿಯಾದರು.
ವಿದ್ಯುತ್ ದೀಪಾಲಂಕಾರ: ತುಂಗಾರತಿಯ ವೇದಿಕೆ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಮಾಜಿ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್ ಅವರು ಚಾಲನೆ ನೀಡಿದರು. ತುಂಗಾರತಿ ಕಾರ್ಯಕ್ರಮವನ್ನು ಜಿಲ್ಲೆಯ ಜನರು ಕಣ್ತುಂಬಿಕೊಂಡರು. ಮಳೆ ಬಂದ್ರು ಸಹ ಜನತೆ ಎಲ್ಲೂ ಹೋಗದೆ ತುಂಗಾರಾತಿಯಲ್ಲಿ ಭಕ್ತಿಯಿಂದ ಪಾಲ್ಗೊಂಡರು. ಈ ವೇಳೆ ಮಂಗಳ ವಾದ್ಯ ಹಾಗೂ ಚಂಡೆಮದ್ದಳೆ ಜನರನ್ನು ರಂಜಿಸಿತು. ತುಂಗಾ ನದಿಗೆ ನಿರ್ಮಿಸಿದ ಶತಮಾನ ಕಂಡ ಸೇತುವೆಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.