ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಗಾ ಡ್ಯಾಂನ ನೀರಿನ ಮಟ್ಟ ಇದೀಗ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದ್ದು, ಸದ್ಯದಲ್ಲೆ ನಗರಕ್ಕೆ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಸುಮಾರು 3.60 ಲಕ್ಷ ಜನಸಂಖ್ಯೆ ಇರೋ ನಗರ. ನಗರವು ದಿನನಿತ್ಯದ ಬಳಕೆಗೆ ಹಾಗೂ ಕುಡಿಯುವ ನೀರಿಗೆ ತುಂಗಾ ಡ್ಯಾಂ ನೀರನ್ನೇ ಆಶ್ರಯಿಸಿದೆ. ಆದರೆ ವಿಪರೀತ ಬೇಸಿಗೆ ಪರಿಣಾಮ ಡ್ಯಾಂನ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ.
ಮುಂಗಾರು ಮಳೆ ಬರೋದು ತಡವಾಗಿದೆ. ಡ್ಯಾಂನ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿರುವುದರಿಂದ ಇರುವ ನೀರಿನಲ್ಲೇ ನಾವು ಇನ್ನು ಒಂದು ತಿಂಗಳ ಕಾಲ ಮಾತ್ರ ಸಂಭಾಳಿಸಬಹುದು. ನಗರಕ್ಕೆ ಕುಡಿಯಲು ಬೇಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾವು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕುಡಿಯಲು ಬಿಟ್ಟು ಬೇರೆ ಯಾವುದೇ ಕಾರಣಗಳಿಗೆ ನಾವು ಡೆಡ್ ಸ್ಟೋರೇಜ್ ನೀರನ್ನು ಬಳಸುವ ಹಾಗಿಲ್ಲ. ಜಿಲ್ಲಾಡಳಿತ ಕೂಡಾ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಆದೇಶ ಮಾಡಿದೆ ಎಂದು ಡ್ಯಾಂನ ಕಾರ್ಯಾಕಾರಿ ಅಭಿಯಂತರ ರಮೇಶ್ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ.