ಶಿವಮೊಗ್ಗ: ತಮ್ಮ ನೆಚ್ಚಿನ ಶಿಕ್ಷಕನನ್ನು ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆಯ ಗೇಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಬಿದರಹಳ್ಳಿಯಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ದಿನೇಶ್ ಎಂಬುವರನ್ನು ಶಿಕ್ಷಣ ಇಲಾಖೆಯು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬಿದರಹಳ್ಳಿ ಗ್ರಾಮದ ಮಲೆನಾಡ ಗಾಂಧಿ ಎಚ್ ಜಿ ಗೋವಿಂದೇಗೌಡರ ಹೆಸರಿನ ಈ ಶಾಲೆಯಲ್ಲಿ ಶಿಕ್ಷಕರಾದ ದಿನೇಶ ಅವರು ಗ್ರಾಮದ ಸಾಕಷ್ಟು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಹಾಗೂ ಶಾಲೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಶಾಲೆಯ ಆವರಣದಲ್ಲಿ ಗಿಡ ಮರಗಳನ್ನು ಬೆಳೆಸಿ ಶಾಲೆಯ ಸುತ್ತಮುತ್ತಲ ಪರಿಸರವನ್ನು ಹಚ್ಚ ಹಸಿರಾಗಿಸಿ ಶಾಲೆಯ ಆವರಣದ ಅಂದವನ್ನು ಹೆಚ್ಚಿಸಿದ್ದಾರೆ. ಜೊತೆಗೆ ಶಾಲೆಯು ಉತ್ತಮ ಫಲಿತಾಂಶ ಅಲ್ಲದೇ, ಪ್ರತಿಯೊಂದು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ಮತ್ತು ಮಕ್ಕಳು ಹೆಚ್ಚೆಚ್ಚು ಅಂಕಗಳನ್ನು ಗಳಿಸಲು ಶಾಲೆಯ ಶಿಕ್ಷಕ ದಿನೇಶ್ ಅವರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.
ಇಂತಹ ಶಿಕ್ಷಕರನ್ನು ಶಿಕ್ಷಣ ಇಲಾಖೆ ಏಕಾಏಕಿ ವರ್ಗಾವಣೆ ಮಾಡಿ ಆದೇಶ ಮಾಡಿದ್ದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿದರಹಳ್ಳಿ ಗ್ರಾಮಸ್ಥರು ಇದನ್ನು ಸಂಪೂರ್ಣವಾಗಿ ಖಂಡಿಸಿ, ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟಿಸಿ, ಶಾಲೆಗೆ ಬೀಗ ಜಡಿದಿದ್ದಾರೆ. ಇನ್ನಷ್ಟು ದಿನ ಶಿಕ್ಷಕ ದಿನೇಶ್ ಅವರು ಅದೇ ಗ್ರಾಮದ ಶಾಲೆಯಲ್ಲೇ ಶಿಕ್ಷಕರಾಗಿ ಅವರು ಸೇವೆ ಸಲ್ಲಿಸಬೇಕು ಎಂದು ಶಾಲೆಯ ವಿದ್ಯಾರ್ಥಿಗಳು ಮತ್ತು ಗ್ರಾಮದ ಜನರು ಬೇಡಿಕೆ ಇಟ್ಟಿದ್ದಾರೆ. ಶಾಲೆಯಲ್ಲಿ ಉತ್ತಮ ಆಡಳಿತ ನಡೆಸಿ, ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠ ಹೇಳಿಕೊಟ್ಟು, ಗ್ರಾಮದ ವಿದ್ಯಾರ್ಥಿಗಳ ಬೆಳವಣಿಗೆಗೆ ಹಾಗೂ ಮಕ್ಕಳ ಅಂಕ ಗಳಿಕೆಯಲ್ಲಿ ಶಿಕ್ಷಕರು ಸಾಕಷ್ಟು ಶ್ರಮ ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಸಾಕಷ್ಟು ಮುಖ್ಯ ಪಾತ್ರ ವಹಿಸಿದ್ದು. ನಮ್ಮ ಶಾಲೆಗೆ ಅವರೇ ಶಿಕ್ಷಕರಾಗಿ ಇರಬೇಕೆಂದು ಶಾಲೆಯ ವಿದ್ಯಾರ್ಥಿನಿಯರಾದ ಯಶಸ್ವಿನಿ ಹಾಗೂ ಶ್ರೇಯ ಒತ್ತಾಯಿಸಿದರು.