ಶಿವಮೊಗ್ಗ:ಮಳೆಗಾಲ ಬಂದ್ರೆ ಸಾಕು ಜಗತ್ಪ್ರಸಿದ್ಧ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಲಗ್ಗೆ ಇಡುತ್ತದೆ. ಈ ಬಾರಿ ಮುಂಗಾರು ಮಳೆ ಪ್ರಾರಂಭದಲ್ಲಿ ಲಾಕ್ಡೌನ್ ಇದ್ದ ಕಾರಣ ಪ್ರವಾಸಿಗರು ಬರಲಾಗಲಿಲ್ಲ. ಆದ್ರೆ ಅನ್ಲಾಕ್ ಆಗಿದ್ದೇ ತಡ ಜೋಗದತ್ತ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಜೋಗದ ಸಿರಿ ಹೆಚ್ಚಿಸಿದ ಮುಂಗಾರು ಮಳೆ: ಶ್ವೇತವೈಭವದ ಅಂದಚಂದ ಪ್ರವಾಸಿಗರಿಗೆ ಆನಂದ - ಶಿವಮೊಗ್ಗದಲ್ಲಿ ಮಳೆ
ಮಳೆಗಾಲ ಹಿನ್ನೆಲೆಯಲ್ಲಿ ಇಮ್ಮಡಿಯಾಗುತ್ತಿರುವ ಜೋಗ ಜಲಪಾತದ ಸೌಂದರ್ಯರಾಶಿಯನ್ನು ಮನದುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಪಾತಕ್ಕೆ ಭೇಟಿ ಕೊಡುತ್ತಿದ್ದಾರೆ.
ಜೋಗ ಜಲಪಾತದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತ ಮೈದುಂಬಲಾರಂಭಿಸಿದೆ. ಹೀಗಾಗಿ ನಿನ್ನೆಯಿಂದ ವೀಕೆಂಡ್ ಪ್ರವಾಸಿಗರು ಜೋಗದತ್ತ ಮುಖ ಮಾಡಿದ್ದಾರೆ. ನಿನ್ನೆ ಜೋಗ ಜಲಪಾತಕ್ಕೆ ಸುಮಾರು 4 ಸಾವಿರಷ್ಟು ಪ್ರವಾಸಿಗರು ಆಗಮಿಸಿದ್ದಾರೆ. ಇಂದು 1 ಲಕ್ಷದಷ್ಟು ಜನ ಆಗಮಿಸುವ ನಿರೀಕ್ಷೆ ಇದೆ.
ಧೋ ಎಂದು ಧುಮ್ಮಿಕ್ಕುವ ಜಲಪಾತದ ಶ್ವೇತವೈಭವವನ್ನು ನೋಡಿ ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಜಲಪಾತದ ನೈಜ ಅಂದ ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ. ರಾಜಾ, ರಾಣಿ, ರೂರಲ್, ರಾಕೆಟ್ ಸದ್ಯ ನೋಡಲು ಲಭ್ಯವಾಗುತ್ತಿದೆ. ಲಾಕ್ಡೌನ್ನಿಂದ ಎಲ್ಲೂ ಹೋಗಲಾಗದೇ ಮನೆಯಲ್ಲಿಯೇ ಇದ್ದ ಜನ ,ಇದೀಗ ಜೋಗದ ಅಂದ ಚಂದ ಕಂಡು ಆನಂದ ಪಡುತ್ತಿದ್ದಾರೆ.