ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಗೊಳಿಸುವ ಕುರಿತು ನಾಳೆ ಸಭೆ ಕರೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ತಡೆಗೆ ಕ್ರಮ ಕೈಗೊಂಡಿದ್ದು, ಜನರು ಸಹ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದಾರೆ ಎಂದರು. ಪ್ರಸ್ತುತ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಬಂದ್ ಮಾಡಲಾಗುತ್ತಿದೆ.
ನಾಳೆ ಬೆಳಗ್ಗೆ ಮತ್ತೊಮ್ಮೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಸಂಸ್ಥೆಗಳು ಸೇರಿ ಶಾಸಕರು, ಸಂಸದರ ಸಭೆ ಕರೆಯಲಾಗಿದೆ ಎಂದರು. ಸಭೆಯ ಬಳಿಕ ಲಾಕ್‌ಡೌನ್ ಮಾಡುವ ಕುರಿತು ನಿರ್ಧಾರ ಮಾಡಲಾಗುವುದು ಎಂದರು.
ಲಾಕ್‌ಡೌನ್ ಜಾರಿ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಪಷ್ಟೀಕರಣ.. ಇನ್ನು, ನನ್ನ ಕುಟುಂಬದ ಸದಸ್ಯನೊಬ್ಬನಿಗೆ ನಿನ್ನೆ ಕೊರೊನಾ ಪಾಸಿಟಿವ್ ಬಂದಿದ್ದು, ಆ ಹಿನ್ನೆಲೆ ಇಂದಿನ ಸಭೆ ಹಾಗೂ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೆ. ನನ್ನ ಕುಟುಂಬಸ್ಥರು, ಅಡುಗೆಯವರು, ಚಾಲಕರು ಸೇರಿ 21 ಜನರ ಕೊರೊನಾ ಪರೀಕ್ಷೆ ಮಾಡಿಸಿದ್ದು, 21 ಜನರ ಗಂಟಲು ದ್ರವ ಮಾದರಿಯ ವರದಿಯು ನೆಗೆಟಿವ್ ಬಂದಿದೆ ಎಂದರು.