ರಾಮನಗರ : ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮತ್ತಷ್ಟು ದುಬಾರಿಯಾಗಿದ್ದು, ಟೋಲ್ ದರ ಹೆಚ್ಚಳ ಮಾಡಲಾಗಿದೆ. ಸದ್ದಿಲ್ಲದೆ ಏರಿಕೆ ಆಗಿರುವ ಟೋಲ್ ದರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರ ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿದ್ದು, ಜೂನ್ 1ರಿಂದ ಪರಿಷ್ಕೃತ ಮೊತ್ತದ ಟೋಲ್ ವಸೂಲಿ ಮಾಡಲಾಗುತ್ತಿದೆ. ಬಹುತೇಕ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಇರುವ ಕಾರಣ ಹೆಚ್ಚಿನ ಮೊತ್ತ ಕಡಿತವಾಗಿರುವುದು ವಾಹನ ಸವಾರರ ಗಮನಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.
2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ ಪ್ರಕಾರ, ಪ್ರತಿ ವರ್ಷವೂ ಟೋಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಕಳೆದ ಏ.1ರಂದು ಹೆದ್ದಾರಿ ಪ್ರಾಧಿಕಾರ ಟೋಲ್ ದರ ಏರಿಕೆ ಮಾಡಿತ್ತು. ಆದರೆ ಇದಕ್ಕೆ ವಾಹನ ಸವಾರರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ದರ ಹೆಚ್ಚಳ ಆದೇಶವನ್ನು ಹಿಂಪಡೆಯಲಾಗಿತ್ತು. ಇದೀಗ ಮತ್ತೆ ಟೋಲ್ ದರ ಏರಿಕೆ ಮಾಡಲಾಗಿದೆ.
ಬೆಂ-ಮೈ ಹೆದ್ದಾರಿ ಹೆಚ್ಚಳವಾದ ಟೋಲ್ ದರ ಹೀಗಿದೆ : ಕಾರು, ವ್ಯಾನ್, ಜೀಪ್‌ಗಳ ಏಕಮುಖ ಸಂಚಾರಕ್ಕೆ 135 ರಿಂದ 165 ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ ಸುಮಾರು 30 ರೂ. ಹೆಚ್ಚಳ ಮಾಡಲಾಗಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ 220ರಿಂದ 270 ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ ಸುಮಾರು 50 ರೂ. ಹೆಚ್ಚಳ ಮಾಡಲಾಗಿದೆ. ಟ್ರಕ್, ಬಸ್, 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 460ರಿಂದ 565 ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ ಬರೋಬ್ಬರಿ 105 ರೂ ಹೆಚ್ಚಳ ಮಾಡಲಾಗಿದೆ.