ಶಿವಮೊಗ್ಗ: ಕಳೆದ ಬಜೆಟ್‍ನಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಜಲಾಮೃತ ಯೋಜನೆಯಡಿ ಕೆರೆಗಳ ಹೂಳೆತ್ತುವುದು ಸೇರಿದಂತೆ ಕೆರೆಗಳ ಪುಜರುಜ್ಜೀವನ ಕಾಮಗಾರಿಗಳಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅಧಿಕಾರಿಗಳಿಗೆ ತಿಳಿಸಿದರು.
ಜಲಾಮೃತ ಯೋಜನೆ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಯೋಜನೆ ಅನುಷ್ಠಾನ ಕುರಿತು ಸಮಾಲೋಚನೆ ನಡೆಸಿದ ಡಿಸಿ, ಹೂಳೆತ್ತುವುದು ಸೇರಿದಂತೆ ಕೆರೆಗಳ ಅಭಿವೃದ್ಧಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಈ ಹಿಂದೆಯೇ ಸೂಚನೆ ನೀಡಿದ್ದರು. ಇದುವರೆಗೆ ಪ್ರಸ್ತಾವನೆ ಸಲ್ಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕೆರೆಗಳ ಪುಜರುಜ್ಜೀವನ ಕಾಮಗಾರಿ ಕೈಗೊಳ್ಳಲು ಉತ್ತಮ ಅವಕಾಶ ಇದಾಗಿದ್ದು, ತಾಲೂಕು ಮಟ್ಟದಲ್ಲಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಮಾರ್ಗಸೂಚಿ ಪ್ರಕಾರ ಕಾಮಗಾರಿ ಕೈಗೊಳ್ಳಲು ಇದರಲ್ಲಿ ಅವಕಾಶವಿದೆ. ಈ ಯೋಜನೆಯಡಿ ಅರಣ್ಯೀಕರಣ ಕೆಲಸ ಕಾರ್ಯಗಳನ್ನು ಸಹ ಕೈಗೊಳ್ಳಬಹುದಾಗಿದೆ ಎಂದರು.
ಜಲಮೂಲಗಳಾದ ಕೆರೆ ,ಕಟ್ಟೆ, ಕಲ್ಯಾಣಿ, ಗೋಕಟ್ಟೆಗಳ ಅಭಿವೃದ್ಧಿ, ಬಹುಕಮಾನು ಚೆಕ್ ಡ್ಯಾಂಗಳ ಪುಜರುಜ್ಜೀವನ, ನೀರು ಸಂಗ್ರಹಣೆಗಾಗಿ ಹೊಸ ಜಲ ಮೂಲಗಳ ನಿರ್ಮಾಣ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಮನೆ, ಜಾನುವಾರು, ಕೃಷಿ ಚಟುವಟಿಕೆಗಳಿಗಾಗಿ ಬಳಸುವ ನೀರಿನ ಆಯವ್ಯಯ ಸಿದ್ಧಪಡಿಸುವುದು ಮತ್ತು ನೀರು ಲಭ್ಯತೆ ಮೇಲೆ ಬಳಕೆಯ ಮಿತಿಯನ್ನು ನಿರ್ಧರಿಸುವುದು, ಗ್ರಾಮಗಳಲ್ಲಿ ತೆರೆದ ಕೊಳವೆ ಬಾವಿಗಳ ಸುತ್ತ ಮಳೆ ನೀರು ರೀಚಾರ್ಜ್ ಘಟಕಗಳ ಸ್ಥಾಪನೆ ಇತ್ಯಾದಿಗಳ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ತಗಲುವ ಒಟ್ಟು ವೆಚ್ಚದ ಶೇ.10ರಷ್ಟು ವಂತಿಗೆಯನ್ನು ಸ್ಥಳೀಯರಿಂದ ಕೆಲಸ ಅಥವಾ ಬಾಡಿಗೆ ರೂಪದಲ್ಲಿ ಪರಿಕರಗಳನ್ನು ಒದಗಿಸಲು ಪ್ರೇರೇಪಿಸಬೇಕು ಎಂದರು.
ಈ ಯೋಜನೆಯಡಿ ಬುಟ್ಟಿಯಿಂದ ಬೆಟ್ಟಕ್ಕೆ ಆಶಯದಡಿ ಬೀಜಾಮೃತದಿಂದ ಸಂಸ್ಕರಿಸಿದ ಸ್ಥಳೀಯ ಜಾತಿಯ ಮರಗಳ ಬೀಜಗಳನ್ನು ಸರ್ಕಾರಿ ಸ್ಥಳಗಳಲ್ಲಿ/ಗುಡ್ಡಗಾಡಿನಲ್ಲಿ ಅಭಿಯಾನದ ಮಾದರಿಯಲ್ಲಿ ಬಿತ್ತುವ ಕಾರ್ಯ ನಡೆಸಬೇಕು ಎಂದರು.
ಪ್ರಸ್ತಾವನೆ ಸಲ್ಲಿಕೆ:
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಜಲಾಮೃತ ಯೋಜನೆಯಡಿ ಒಟ್ಟು 37 ಕೆರೆಗಳನ್ನು ಗುರುತಿಸಲಾಗಿದ್ದು, 5.80 ಕೋಟಿ ರೂ. ಅಂದಾಜು ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆಯಡಿ 133 ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ 177 ಬಹು ಕಮಾನು ಮಾದರಿ ಚೆಕ್ ಡ್ಯಾಂ ನಿರ್ಮಾಣದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.