ಕರ್ನಾಟಕ

karnataka

ETV Bharat / state

ಭದ್ರಾವತಿ ಬಳಿ ಲಾರಿ ಓವರ್​ಟೇಕ್ ವೇಳೆ ಭೀಕರ ಅಪಘಾತ: ಬೈಕ್​ನಲ್ಲಿದ್ದ ಮೂವರು ಬಾಲಕರ ದುರ್ಮರಣ - ಬೈಕ್ ಲಾರಿ ಡಿಕ್ಕಿ

ಬೈಕ್ - ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಭದ್ರಾವತಿ ತಾಲೂಕಿನಲ್ಲಿ ಕಳೆದ ರಾತ್ರಿ ನಡೆದಿದೆ.

ಲಾರಿ ಓವರ್​ಟೇಕ್ ವೇಳೆ ಅಪಘಾತ
ಲಾರಿ ಓವರ್​ಟೇಕ್ ವೇಳೆ ಅಪಘಾತ

By ETV Bharat Karnataka Team

Published : Oct 1, 2023, 12:24 PM IST

Updated : Oct 1, 2023, 12:30 PM IST

ಶಿವಮೊಗ್ಗ: ಲಾರಿ ಹಾಗೂ ಎರಡು ಬೈಕ್​​ಗಳ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿ, ಓರ್ವ ಗಾಯಗೊಂಡಿರುವ ಘಟನೆ ಭದ್ರಾವತಿ ತಾಲೂಕು ಕಲ್ಲಿಹಾಳ್ ಹಾಗೂ ಅರಹತೊಳಲು ಗ್ರಾಮದ ನಡುವೆ ಕಳೆದ ರಾತ್ರಿ ನಡೆದಿದೆ. ಮರದ ತುಂಡು ತುಂಬಿಕೊಂಡು ಹೊರಟಿದ್ದ ಲಾರಿಗೆ ಬೈಕ್​ಗಳು ಮಧ್ಯದಿಂದ ಬಂದು ಡಿಕ್ಕಿ ಹೊಡೆದಿವೆ ಎಂದು ತಿಳಿದುಬಂದಿದೆ.

ಒಂದು ಬೈಕ್​​ನಲ್ಲಿದ್ದ ಮೂವರು ಅಪ್ರಾಪ್ತರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಭದ್ರಾವತಿ ತಾಲೂಕು ಜಂಬರಘಟ್ಟ ಗ್ರಾಮದ ಶಶಾಂಕ್(17), ಯಶವಂತ್(17) ಹಾಗೂ ವಿಕಾಸ್(17) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕ್​​ನಲ್ಲಿದ್ದ ಅರದೊಟ್ಲು ಗ್ರಾಮದ ಗಗನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಕಲ್ಲಿಹಾಳ್ ಗ್ರಾಮದಲ್ಲಿ ಶನಿವಾರ ನಡೆದ ಗಣಪತಿ ನಿಮಜ್ಜನ ಮೆರವಣಿಗೆ ಮುಗಿಸಿ ವಾಪಸ್ ಆಗುವಾಗ ಈ ಘಟನೆ ನಡೆದಿದೆ. ಈ ಮೂವರು ಸ್ನೇಹಿತರು ಒಂದೇ ಬೈಕ್​​ನಲ್ಲಿ ಬರುತ್ತಿದ್ದರು. ಲಾರಿ ಸಹ ಕಲ್ಲಿಹಾಳ್ ಕಡೆಯಿಂದ ಕೈಮರಕ್ಕೆ ಬರುತ್ತಿತ್ತು. ಬೈಕ್​​ನಲ್ಲಿದ್ದವರು ಲಾರಿಯನ್ನು ಹಿಂದಿಕ್ಕಲು ಹೋದಾಗ ಮುಂದೆ ಬೈಕ್ ಬಂದಿದೆ. ಈ ವೇಳೆ ಬೈಕ್ ಪಕ್ಕಕ್ಕೆ ತೆಗೆದುಕೊಳ್ಳಲು ಹೋಗಿ ಚಲಿಸುತ್ತಿದ್ದ ಲಾರಿಯ ಮಧ್ಯ ಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಲಾರಿ ಕೆಳಗೆ ಹೋಗಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ - ಸ್ಯಾಂಡಲ್​ವುಡ್​ ಸ್ಟಾರ್ ಪೊಲೀಸ್​ ವಶಕ್ಕೆ

ಬೆಂಗಳೂರಲ್ಲಿ ನಟನ ಕಾರು ಡಿಕ್ಕಿ: ಮಹಿಳೆ ಸಾವು

ಸ್ಯಾಂಡಲ್​ವುಡ್ ನಟ ನಾಗಭೂಷಣ್ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, ಅವರ ಪತಿ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಕೊಣನಕುಂಟೆ ಬಳಿಯ ವಸಂತಪುರ ರಸ್ತೆಯಲ್ಲಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಪ್ರೇಮಾ (48) ಸಾವನ್ನಪ್ಪಿದರೆ, ಕೃಷ್ಣ (58) ಗಾಯಗೊಂಡಿದ್ದಾರೆ.

ಆರ್.ಆರ್.ನಗರದಿಂದ ಜೆ.ಪಿ.ನಗರ ಮಾರ್ಗವಾಗಿ ತೆರಳುತ್ತಿದ್ದಾಗ ನಟನ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ರಸ್ತೆ ದಾಟುತ್ತಿದ್ದ ಕೃಷ್ಣ ಮತ್ತು ಪ್ರೇಮಾ ದಂಪತಿಗೆ ನಟನ ಕಾರು ಡಿಕ್ಕಿಯಾಗಿ ನಂತರ ಫುಟ್ ಪಾತ್ ಮೇಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ನಟನ ವಿರುದ್ಧ ಪ್ರಕರಣ ದಾಖಲಾಗಿದೆ.

ಅಪಘಾತದ ವೇಳೆ ನಾಗಭೂಷಣ್ ಮದ್ಯ ಸೇವಿಸಿರಲಿಲ್ಲ: ಅಪಘಾತದ ಸಂದರ್ಭದಲ್ಲಿ ನಟ ನಾಗಭೂಷಣ್ ಮದ್ಯಪಾನ ಮಾಡಿರಲಿಲ್ಲ ಎಂಬುದು ವೈದ್ಯಕೀಯ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ನಾಗಭೂಷಣ್ ಅವರನ್ನ ವಶಕ್ಕೆ ಪಡೆದಿದ್ದ ಪೊಲೀಸರು, ರಾತ್ರಿಯೇ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ನಟ ಮದ್ಯ ಸೇವಿಸಿರಲಿಲ್ಲ ಎಂಬುದು ಗೊತ್ತಾಗಿದೆ. ಏಕಾಏಕಿ ದಂಪತಿ ಕೆಳಗಿಳಿದ ಪರಿಣಾಮ ಗಾಬರಿಯಿಂದ ಅಪಘಾತವಾಗಿದೆ ಎಂದು ನಾಗಭೂಷಣ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Last Updated : Oct 1, 2023, 12:30 PM IST

ABOUT THE AUTHOR

...view details