ಶಿವಮೊಗ್ಗ: ಸರಿ ಸುಮಾರು 37 ವರ್ಷಗಳ ಹಿಂದೆ ನಡೆದ ಘಟನೆ ಇದು.ರೈತರ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ರೈತರು ರೈತ ಸಂಘದ ನೇತೃತ್ವದಲ್ಲಿ ನಾಗಸಮುದ್ರ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಅದೇ ವೇಳೆಗೆ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರ ಕಾರ್ಯಕ್ರಮ ನಾಗಸಮುದ್ರಕ್ಕೆ ಸಮೀಪದ ಮಂಗೋಟೆ ಗ್ರಾಮದಲ್ಲಿ ಆಯೋಜನೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದರು.
ಇದು ತಿಳಿಯುತ್ತಿದ್ದಂತೆ ಕಾಗೋಡು ತಿಮ್ಮಪ್ಪ ಅವರ ಮಂಗೋಟೆ ಕಾರ್ಯಕ್ರಮವನ್ನು ರದ್ಧುಗೊಳಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಪೊಲೀಸ್ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾರಂಭಿಸಿದ್ದರು. ಆಗ ಉದ್ರಿಕ್ತಗೊಂಡಿದ್ದ ಕೆಲ ರೈತರು ಒಂದು ಪೊಲೀಸ್ ಜೀಪ್ ಹಾಗೂ ಇನ್ನೊಂದು ಪೊಲೀಸ್ ವ್ಯಾನ್ಗೆ ಬೆಂಕಿ ಹಚ್ಚಿದ್ದರು. ಇದರಿಂದ ಸಿಟ್ಟಿಗೆದ್ದ ಪೊಲೀಸ್ ಇಲಾಖೆ ರೈತರ ಮೇಲೆ ಗೋಲಿಬಾರ್ ನಡೆಸಿದ್ದರಿಂದಾಗಿ ಮೂವರು ರೈತರು ಜೀವ ತೆತ್ತಿದ್ದರು.