ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 950 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಶಿವಮೊಗ್ಗ : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ವೈರಸ್ ತಡೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಕೇರಳದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಉಪ ತಳಿಯ ಪ್ರಕರಣಗಳು ಜಿಲ್ಲೆಯಲ್ಲೂ ಕಂಡುಬರಬಹುದು ಎಂಬ ನಿರೀಕ್ಷೆಯಿಂದ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಈಗಾಗಲೇ ಸರ್ಕಾರದ ಆದೇಶದಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಆರಂಭಿಸಲಾಗಿದೆ.
ಸದ್ಯಕ್ಕೆ ಜಿಲ್ಲೆಯ ಮೆಗ್ಗಾನ್ ಭೋಧನಾಸ್ಪತ್ರೆಯಲ್ಲಿ ಲಭ್ಯವಿರುವ ವ್ಯವಸ್ಥೆ ಕುರಿತು ವಿವರ ನೀಡಿದ ಅಧೀಕ್ಷಕ ಡಾ.ತಿಮ್ಮಪ್ಪ ಅವರು, "ಆಸ್ಪತ್ರೆಯಲ್ಲಿ 950 ಆಕ್ಸಿಜನ್ ಬೆಡ್ಗಳು ಲಭ್ಯವಿದೆ. 100 ಐಸಿಯು ಬೆಡ್ಗಳನ್ನು ಸಿದ್ಧಪಡಿಸಲಾಗಿದೆ. 85 ವೆಂಟಿಲೇಟರ್ ಬೆಡ್ಗಳಿವೆ. ಕೋವಿಡ್ ಕುರಿತು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಕೋವಿಡ್ ಪಾಸಿಟಿವ್ ಕಂಡುಬಂದರೆ ಯಾವ ರೀತಿ ನಿಯಮ ಪಾಲಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ, "ಕೋವಿಡ್ ಪಾಸಿಟಿವ್ ಕಂಡು ಬಂದರೆ ಅವರನ್ನು ಕ್ವಾರಂಟೈನ್ ಮಾಡಲಾಗುವುದು. ಅಂತವರು ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು. ಜ್ವರ, ಶೀತ, ಕೆಮ್ಮು ಇದ್ದವರು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ತಾವೇ ಮಾತ್ರೆ ತೆಗೆದುಕೊಂಡು ಚಿಕಿತ್ಸೆ ಪಡೆದುಕೊಳ್ಳಬಾರದು. 60 ವರ್ಷ ಮೇಲ್ಪಟ್ಟವರು ಹಾಗೂ ಚಿಕ್ಕ ಮಕ್ಕಳನ್ನು ಜನಜಂಗುಳಿ ಇರುವ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬಾರದು'' ಎಂದರು.
ಮುಂಜಾಗ್ರತಾ ಕ್ರಮವಾಗಿ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸೂಕ್ತ ಕ್ರಮ ವಹಿಸಲಾಗಿದೆ. ಈಗಾಗಲೇ ವಾರ್ಡ್ಗಳನ್ನು ತಯಾರಿ ಮಾಡಿಕೊಳ್ಳಲಾಗಿದೆ. ಕೊರೊನಾ ಲಕ್ಷಣಗಳಿದ್ದರೆ ಮಾಸ್ಕ್ ಧರಿಸಬೇಕು. ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ 2 ಪಿ.ಎಸ್.ಎ.(ಆಕ್ಸಿಜನ್) ಪ್ಲಾಂಟ್ ಇವೆ. ಪ್ರತಿ ಗಂಟೆಗೆ 1 ಸಾವಿರ ಲೀ. ಪ್ರಮಾಣದ ಆಕ್ಸಿಜನ್ ಉತ್ಪಾದನೆಯಾಗುತ್ತದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಎಲ್.ಎಂ.ಒ. ಸ್ಟೋರೆಜ್ ಟ್ಯಾಂಕ್ಗಳಿವೆ. ಭದ್ರಾವತಿಯ ವಿಐಎಸ್ಎಲ್ನಲ್ಲಿ 200 ಆಕ್ಸಿಜನ್ ಜಂಬೋ ಸಿಲಿಂಡರ್ಗೆ ತುಂಬುವ ಬಾಟ್ಲಿಂಗ್ ಸಾಮರ್ಥ್ಯದ ಘಟಕವಿದೆ ಎಂದು ತಿಳಿಸಿದರು.
ಇದನ್ನೂ ಓದಿ :ರಾಜ್ಯದಲ್ಲಿಂದು 2,366 ಜನರಿಗೆ ಕೋವಿಡ್ ಪರೀಕ್ಷೆ ; 28 ಸೋಂಕಿತರು ಪತ್ತೆ
ಶಿವಮೊಗ್ಗಕ್ಕೆ ಕೊರೊನಾ ಎಂಟ್ರಿ : ಜಿಲ್ಲೆಯಲ್ಲಿ ಶುಕ್ರವಾರ ಮೂರು ಕೊರೊನಾ ಪಾಸಿಟಿಟ್ ಕೇಸ್ಗಳು ಕಂಡು ಬಂದಿದೆ. ಓರ್ವ ಮಹಿಳೆ ಸೇರಿದಂತೆ ಇಬ್ಬರು ಪುರುಷರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಇದರಲ್ಲಿ ಓರ್ವ ಮಹಿಳೆಯು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರನ್ನು ಮನೆಯಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಮೂವರಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ.
ಮೂವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿರುವ ಕುರಿತು ಸ್ಪಷ್ಟಪಡಿಸಿದ ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕರಾದ ಡಾ.ತಿಮ್ಮಪ್ಪನವರು, ಮೊನ್ನೆ ಪರೀಕ್ಷೆ ನಡೆಸಿದ ಮೂವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಆದರೆ, ಯಾರು ಅಪಾಯದ ಸ್ಥಿತಿಯಲ್ಲಿ ಇಲ್ಲ. ಎಲ್ಲರೂ ನಾರ್ಮಲ್ ಆಗಿದ್ದಾರೆ. ಜನತೆ ಆತಂಕಕ್ಕೆ ಒಳಗಾಗುವುದು ಬೇಡ. 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಿದರು.