ಶಿವಮೊಗ್ಗ:ಕರ್ನಾಟಕದ ಶಬರಿಮಲೆ ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯ ಬೆಜ್ಜವಳ್ಳಿಯಲ್ಲಿ ಇಂದು ತಿರುವಾಭರಣ ಉತ್ಸವ ಸಂಭ್ರಮದಿಂದ ನಡೆಯಿತು.
ಕರ್ನಾಟಕದ ಶಬರಿಮಲೆ ಬೆಜ್ಜವಳ್ಳಿಯಲ್ಲಿ ಸಂಭ್ರಮದ ತಿರುವಾಭರಣ ಉತ್ಸವ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿರುವ ಅಯ್ಯಪ್ಪ ದೇವಾಲಯದಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಡೆಯುವ ಎಲ್ಲಾ ಆಚರಣೆಗಳು ಇಲ್ಲಿ ನಡೆಯುತ್ತವೆ. ಕಳೆದ 33 ವರ್ಷಗಳಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಶಬರಿಮಲೆಯಂತೆ ಇಲ್ಲೂ ಸಹ ಅಯ್ಯಪ್ಪನಿಗೆ ಹಾಕುವ ಆಭರಣಗಳ ಉತ್ಸವ ಜರುಗುತ್ತದೆ.
ಇಂದು ಮತ್ತು ನಾಳೆ ಎರಡು ದಿನ ಧಾರ್ಮಿಕ ಕಾರ್ಯಕ್ರಮಗಳು ಸಂತೋಷ್ ಗುರೂಜಿರವರ ನೇತೃತ್ವದಲ್ಲಿ ನಡೆಯುತ್ತವೆ. ಅಯ್ಯಪ್ಪನ ಆಭರಣಗಳು ಸಂತೋಷ್ ಗುರೂಜಿಯರವರ ಮನೆಯಿಂದ ದೇವಾಲಯಕ್ಕೆ ಬರುತ್ತವೆ. ದೇವಾಲಯಕ್ಕೆ ಆಭರಣ ತರುವ ವೇಳೆ ವಿವಿಧ ಕಲಾತಂಡಗಳು ಭಾಗಿಯಾಗುತ್ತವೆ. ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಗರುಡ ದರ್ಶನ ನೀಡುತ್ತದೆ.
ಬೆಜ್ಜವಳ್ಳಿಯಲ್ಲಿ ಗರುಡ ದರ್ಶನ ವಿಶೇಷ:
ಶಬರಿಮಲೆಯಂತೆ ಬೆಜ್ಜವಳ್ಳಿಯಲ್ಲೂ ಸಹ ಗರುಡ ದರ್ಶನವಾಗುತ್ತದೆ. ಇಂದು ಸಹ ತಿರುವಾಭರಣದ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ದೇವಾಲಯದ ಮೇಲ್ಭಾಗದಲ್ಲಿ ಗುರುಡ ದರ್ಶನ ನೀಡಿದೆ. ಗರುಡ ತಿರುವಾಭರಣದ ಮೆರವಣಿಗೆ ದೇವಾಲಯ ಆವರಣ ತಲುಪುವವರೆಗೂ ದರ್ಶನ ನೀಡಿ ಮರೆಯಾಯಿತು. ತಿರುವಾಭರಣದ ಮೆರವಣಿಗೆ ದೇವಾಲಯ ತಲುಪುತ್ತಿದ್ದಂತೆ ಅಯ್ಯಪ್ಪನಿಗೆ ಆಭರಣ ಹಾಕಿ ಪೂಜೆ ಸಲ್ಲಿಸಲಾಗುತ್ತದೆ.
ಪಲ್ಲಕ್ಕಿ ಪವಾಡ ಅತಿಮುಖ್ಯ:
ಬೆಜ್ಜವಳ್ಳಿಯಲ್ಲಿ ಅಯ್ಯಪ್ಪನ ಮೆರವಣಿಗೆ ನಡೆಸುವ ಪಲ್ಲಕ್ಕಿಯ ಪವಾಡ ಪ್ರಮುಖವಾಗಿದೆ. ಪಲ್ಲಕ್ಕಿಯನ್ನು ಮುಟ್ಟಿ ಏನೇ ಕೇಳಿಕೊಂಡರು ಅದು ಈಡೇತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಕೋವಿಡ್ನಿಂದಾಗಿ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸಿಲ್ಲ. ಅಲ್ಲದೆ ಯಾವುದೇ ವಿಐಪಿಗಳನ್ನು ಸಹ ದೇವಾಲಯಕ್ಕೆ ಆಹ್ವಾನಿಸಿಲ್ಲ. ಕೊರೊನಾದಿಂದಾಗಿ ಭಕ್ತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿತ್ತು. ಬೆಜ್ಜವಳ್ಳಿಯಲ್ಲಿ ಕುಟುಂಬ ಸಮೇತರಾಗಿ ಭಕ್ತರು ಬಂದು ಅಯ್ಯಪ್ಪನ ದರ್ಶನ ಪಡೆಯುವುದು ವಿಶೇಷವಾಗಿದೆ. ಕೊರೊನಾದಿಂದ ಎಲ್ಲರೂ ಮುಕ್ತವಾಗುವಂತೆ ಅಯ್ಯಪ್ಪ ಅನುಗ್ರಹಿಸಲಿ ಎಂದು ಬೆಜ್ಜುವಳ್ಳಿಯ ಹರಿಹರತ್ಮಾಜ ಪೀಠದ ಪೀಠಾದಿಪತಿ ಸಂತೋಷ್ ಗುರೂಜಿ ಪ್ರಾರ್ಥಿಸಿದ್ದಾರೆ.