ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಬಹಳ ಬೆಲೆ ಇದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಎಂಬ ಮಾತನ್ನ ಎಲ್ಲರೂ ಹೇಳುತ್ತಾರೆ. ಕಾಂಗ್ರೆಸ್ ನಾಯಕತ್ವ ಎನ್ನುತ್ತಿದ್ದಂತೆ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಮಹಾತ್ಮ ಗಾಂಧಿ ಅವರ ಹೆಸರುಗಳು ನೆನಪಾಗುತ್ತವೆ. ಆದರೆ ಇಂದು ಕಾಂಗ್ರೆಸ್ ಪಕ್ಷ ಅನ್ನುತ್ತಿದ್ದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರುಗಳು ಕೇಳಿ ಬರುತ್ತಿವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಪಕ್ಷ ದೇಶದಲ್ಲಿ ಒಡೆದ ಕನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಇನ್ನೊಮ್ಮೆ ಒಟ್ಟಿಗೆ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷ ಎಂದ ತಕ್ಷಣ ಆ ಪಕ್ಷದ ನಾಯಕ ಯಾರು, ಪಕ್ಷದ ಸಿದ್ಧಾಂತವೇನು, ಪಕ್ಷದ ಕಾರ್ಯಕರ್ತರು ಯಾರು ಎಂಬುದು ಬಹಳ ಮುಖ್ಯ. ಇವತ್ತು ದೇಶದ 23 ಕಾಂಗ್ರೆಸ್ ನಾಯಕರು ಪತ್ರ ಬರೆದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗಾಂಧಿ ಕುಟುಂಬವೇ ಬೇಡ ಸಾಮೂಹಿಕ ನಾಯಕತ್ವ ಬೇಕು ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನಾಯಕತ್ವದ ಗೊಂದಲ ಎಂದರು.
ಇಡೀ ದೇಶದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಅವರಂತಹ ನಾಯಕರನ್ನು ಪಡೆದ ನಾವೇ ಧನ್ಯರು. ನಮ್ಮ ಪಕ್ಷಕ್ಕೆ ದೇಶವನ್ನು ಅಭಿವೃದ್ಧಿಪಡಿಸುವ, ಇತರೆ ದೇಶಗಳ ಮುಂದೆ ಭಾರತವನ್ನು ಮುಂದೆ ತರಬೇಕು ಎನ್ನುವುದು ನಮ್ಮ ಪಕ್ಷದ ಸಿದ್ಧಾಂತ ಎಂದರು.