ಶಿವಮೊಗ್ಗ: ಇಲ್ಲಿನ ದೇವರಾಜ ಅರಸು ನಗರದಲ್ಲಿ ಗಿರೀಶ್ ಎಂಬಾತ ತನ್ನ ಮನೆಯಲ್ಲಿ 10ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸಾಕಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆ ತುಂಬಾ ಬೀದಿ ನಾಯಿ: ಸ್ಥಳೀಯರ ಆಕ್ರೋಶ ಗಿರೀಶ್ ಮನೆಯಲ್ಲಿ ಒಂದು ನಾಯಿಯನ್ನು ಸಾಕಿಕೊಂಡಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಬದಲಿಗೆ 10ಕ್ಕೂ ಹೆಚ್ಚುಬೀದಿ ನಾಯಿಗಳನ್ನು ಸಾಕಿಕೊಂಡಿದ್ದು, ಈ ನಾಯಿಗಳು ರಸ್ತೆಯಲ್ಲಿ ಯಾರೂ ಓಡಾಡದಂತೆ ಮಾಡಿವೆ. ಬೈಕ್, ಕಾರು ಓಡಾಡಿದರೆ ಹಿಂಬಾಲಿಸಿಕೊಂಡು ಹೋಗುತ್ತವೆ. ಅಲ್ಲದೆ ಮಕ್ಕಳು ರಸ್ತೆಗೆ ಆಟ ಆಡಲು ಬಂದ್ರೆ, ಮಕ್ಕಳ ಮೈ ಮೇಲೆ ಎಗರುವುದು, ಕಚ್ಚುವುದು ಮಾಡುತ್ತಿವೆ. ಅಲ್ಲದೆ, ಮನೆ ಮುಂದೆ ಬಿಟ್ಟಿದ್ದ ಬೈಕ್ ಸೀಟ್ ಕಿತ್ತು ಹಾಕುವುದು ಸೇರಿದಂತೆ ಚಪ್ಪಲಿಯನ್ನು ಕಚ್ಚಿ ಹಾಕುತ್ತಿವೆ. ಇದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ದಿನಪೂರ್ತಿ ಅಲ್ಲದೆ ರಾತ್ರಿ ಸಹ ಬೊಗಳುತ್ತಿರುತ್ತವೆ. ದೇವರಾಜು ಅರಸು ನಗರದ ಪಕ್ಕ ರೈಲು ಸಂಚಾರ ಮಾಡುತ್ತಿರುತ್ತದೆ. ಪ್ರತಿ ಸಲ ರೈಲು ಬಂದಾಗ ನಾಯಿಗಳು ಬೊಗಳಲು ಪ್ರಾರಂಭಸಿದರೆ ಅರ್ಧ ಗಂಟೆಯಾದರೂ ನಿಲ್ಲಿಸುವುದಿಲ್ಲವಂತೆ. ಮನೆ ಒಳಗೆ ಸಾಕಿಕೊಂಡಿರುವುದರಿಂದ ಅವು ಅಲ್ಲೆ ಎಲ್ಲವನ್ನು ಮಾಡುವುದರಿಂದ ಅಕ್ಕಪಕ್ಕದ ಮನೆಯವರಿಗೆ ಗಬ್ಬು ವಾಸನೆ ಬರುತ್ತಿದೆ. ಇದನ್ನು ಕೇಳಲು ಹೋದವರ ಮೇಲೆಯೇ ಜಗಳವಾಡುತ್ತಾನಂತೆ ಗಿರೀಶ್.
ಇನ್ನುನಾಯಿ ಮೇಲಿನ ಪ್ರೀತಿಯಿಂದ ಗಿರೀಶ್ ಅಕ್ಕಪಕ್ಕದವರ ಬಳಿ ಜಗಳವಾಡುತ್ತಾನೆ. ಮಹಾನಗರ ಪಾಲಿಕೆಯವರಿಗೆ ದೂರು ನೀಡಿದರೆ, ಪಾಲಿಕೆಯ ಅಧಿಕಾರಿಗಳು ಬಂದು ಬೀದಿ ನಾಯಿಗಳನ್ನು ನೀವೆ ದತ್ತು ತೆಗದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಸದ್ಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಬಂದು ಗಿರೀಶನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರಿಂದ ನಾಯಿಗಳನ್ನು ಬೇರೆ ಕಡೆ ಬಿಟ್ಟುಬರಲು ಗಿರೀಶ್ ಕಾಲಾವಕಾಶ ಕೇಳಿದ್ದಾನೆ. ಹೀಗೆ ಪ್ರತಿ ಸಲ ಕಾಲಾವಕಾಶ ಕೇಳಿ ನಾಯಿಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಸಾಕುತ್ತಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ.