ಕರ್ನಾಟಕ

karnataka

ETV Bharat / state

ಮಲೆನಾಡಿಗರನ್ನು ಕಾಡುತ್ತಿರುವ ಮಂಗನಕಾಯಿಲೆ.. ಬಲಿಯಾಗುತ್ತಲೇ ಇದ್ದಾರೆ ಜನ - ಕ್ಯಾಸನೂರು ಫಾರೆಸ್ಟ್ ಡಿಸೀಸ್​

ಕ್ಯಾಸನೂರು ಗ್ರಾಮದ ಅರಣ್ಯದಲ್ಲಿ ಈ ಕಾಯಿಲೆ ಕಂಡು ಬಂದಿದ್ದರಿಂದ ಈಗಲೂ ಕ್ಯಾಸನೂರು ಫಾರೆಸ್ಟ್ ಡಿಸೀಸ್​ ಎಂದು ಕರೆಯಲಾಗುತ್ತದೆ. ಮೇ 3 ರಂದು ಸಾಗರ ತಾಲೂಕು ಅರಳಗೋಡು ಗ್ರಾಮ ಪಂಚಾಯತ್​ ಸದಸ್ಯ ರಾಮಸ್ವಾಮಿ ಕರಮನೆ (55) ರವರು ಕೆಎಫ್​ಡಿಯಿಂದ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಸಿದ್ದಾಪುರ ತಾಲೂಕಿನಲ್ಲೂ ಸಹ 85 ವರ್ಷದ ವೃದ್ಧೆಯೂಬ್ಬರು ಇದಕ್ಕೆ ಬಲಿಯಾಗಿದ್ದಾರೆ.

The KFD disease is haunting the people of malnad
ಮಲೆನಾಡಿಗರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕೆಎಫ್ ಡಿ ಸಮಸ್ಯೆ.

By

Published : May 5, 2022, 7:46 PM IST

Updated : May 5, 2022, 8:13 PM IST

ಶಿವಮೊಗ್ಗ:ಮಲೆನಾಡಿಗರನ್ನು ಮಂಗನಕಾಯಿಲೆ ಬಿಟ್ಟೂ ಬಿಡದೆ ಕಾಡುತ್ತಿದೆ. 1957 ರಲ್ಲಿ ಕ್ಯಾಸನೂರಿನಲ್ಲಿ ಈ ಕಾಯಿಲೆ ಮೊದಲು ಕಂಡು ಬಂದಿತ್ತು. ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಕರೆಯಲ್ಪಡುವ ಈ ರೋಗ ಹುಟ್ಟಿದ್ದೆ, ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಗ್ರಾಮದಲ್ಲಿ ಎಂಬುದು ಅಚ್ಚರಿಯ ವಿಚಾರವಾಗಿದೆ. ಕೆಎಫ್​ಡಿ ರೋಗಕ್ಕೆ ಇದುವರೆಗೂ ನೂರಾರು ಜನ ಬಲಿಯಾಗಿದ್ದಾರೆ. ಮೇ 3 ರಂದು ಸಾಗರ ತಾಲೂಕು ಅರಳಗೋಡು ಗ್ರಾಮ ಪಂಚಾಯತ್​ ಸದಸ್ಯ ರಾಮಸ್ವಾಮಿ ಕರಮನೆ (55) ಅವರು ಕೆಎಫ್​ಡಿಯಿಂದ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲೂ ಸಹ 85 ವರ್ಷದ ವೃದ್ಧೆ ಇದಕ್ಕೆ ಬಲಿಯಾಗಿದ್ದಾರೆ.

ಕ್ಯಾಸನೂರು ಫಾರೆಸ್ಟ್ ಡಿಸೀಸ್: ಈ ಕಾಯಿಲೆ ಕ್ಯಾಸನೂರು ಗ್ರಾಮದ ಅರಣ್ಯದಲ್ಲಿ ಕಂಡು ಬಂದಿದ್ದರಿಂದ ಈಗಲೂ ಕ್ಯಾಸನೂರು ಫಾರೆಸ್ಟ್ ಡಿಸೀಸ್​(ಕೆಎಫ್​ಡಿ) ಎಂದು ಕರೆಯಲಾಗುತ್ತದೆ. ಅಲ್ಲದೇ ಇದು ಮಂಗನಿಂದ ಹರಡುತ್ತದೆ ಎಂಬ ಕಾರಣದಿಂದ ಇದನ್ನು ಮಂಗನ ಕಾಯಿಲೆ ಎಂದು ಸಹ ಕರೆಯುತ್ತಾರೆ.‌ ಇದು ಸಣ್ಣ ಉಣುಗು ಅಥವಾ ಕೀಟ ಕಚ್ಚುವುದರಿಂದ ರೋಗ ಬರುತ್ತದೆ. ಈ ಉಣುಗು ಕಾಡಿನಲ್ಲಿ ಮಂಗ ಸೇರಿದಂತೆ ಮೊಲ, ನವಿಲು ಹಾಗೂ ಕೆಲ ಪಕ್ಷಿಗಳ ದೇಹದ ಮೇಲೆ ಇರುತ್ತದೆ. ಇದು ಪರಾವಲಂಬಿ ಜೀವಿಯಾಗಿದೆ. ಹೆಚ್ಚಾಗಿ ಮಂಗನಲ್ಲಿಯೇ ವಾಸವಾಗಿರುತ್ತದೆ.

ಇದನ್ನೂ ಓದಿ: ಕೊರೊನಾ ಮಹಾಮಾರಿ ನಡುವೆ ಮಲೆನಾಡಿನಲ್ಲಿ ಕೆಎಫ್​​​ಡಿಗೆ 4ನೇ ಬಲಿ

ಮಂಗಗಳು ಸತ್ತ ನಂತರ ಅಲ್ಲಿ ಉಣುಗುಗಳಿಗೆ ರಕ್ತ ಸಿಗದ ಕಾರಣ, ಅವು ಮೃತ ಮಂಗನ ದೇಹದಿಂದ ಹೊರ ಬರುತ್ತವೆ. ಹೀಗೆ ಹೊರ ಬಂದ ಉಣುಗುಗಳು ಬೇರೆ ಜೀವಿಗಳ ಬಳಿ ಹೋಗಿ ಬದುಕುತ್ತವೆ. ಕಾಡಿಗೆ ಹೋದ ಜಾನುವಾರು ಹಾಗೂ ಮನುಷ್ಯರಲ್ಲಿ ಸೇರಿ‌ಕೊಳ್ಳುತ್ತವೆ. ಹೀಗೆ ಬಂದ ಉಣುಗು ಮನುಷ್ಯನಿಗೆ ಕಚ್ಚುತ್ತದೆ. ಇದು ಕಚ್ಚಿದ ಮೇಲೆ ಜ್ವರ, ಶೀತ ಕಾಣಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ, ಸಾವು ಕಟ್ಟಿಟ್ಟ ಬುತ್ತಿ.

ಮಲೆನಾಡಿಗರನ್ನು ಕಾಡುತ್ತಿರುವ ಮಂಗನಕಾಯಿಲೆ

ಶಿವಮೊಗ್ಗ ಜಿಲ್ಲೆಯ ಬಹು ಭಾಗ ಅರಣ್ಯ ಪ್ರದೇಶದಿಂದ ಕೂಡಿದ್ದು, ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಜಿಲ್ಲೆಯ ಜನತೆಯ ಜೊತೆಗೆ ಆರೋಗ್ಯ ಇಲಾಖೆಯಲ್ಲೂ ಸಹ ಗಾಬರಿಯನ್ನುಂಟು ಮಾಡಿದೆ. ಮಂಗನ ಕಾಯಿಲೆ ಡಿಸೆಂಬರ್ ಅಥವಾ ಜನವರಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈ ಬಾರಿ ಈಗಲೇ ಕಾಣಿಸಿಕೊಂಡ ಕಾರಣ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಮಂಗನ ಕಾಯಿಲೆ ಲಕ್ಷಣಗಳು: ಉಣುಗು ಕಚ್ಚಿದ ಒಂದೆರಡು ದಿನಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ತೀವ್ರ ಜ್ವರ, ಸುಸ್ತು, ಊಟ ಸೇರದೇ ಇರುವುದು ಆಗುತ್ತದೆ. ಇದು ಮೊದಲ ವಾರದ ಲಕ್ಷಣ, ಎರಡನೇ ವಾರಕ್ಕೆ ಕಣ್ಣು ಕೆಂಪಗಾಗುವುದು, ಜ್ವರ ತೀವ್ರಗೊಳ್ಳುವುದು, ಕಣ್ಣಿನಿಂದ ರಕ್ತ ಬರುವುದು ಸೇರಿದಂತೆ ಪ್ರಜ್ಞೆ ತಪ್ಪುವುದು ಉಂಟಾಗುತ್ತದೆ. ನಂತರ ದೇಹದ ಇತರ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದ್ರೆ ರೋಗಿಯ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ.

ಜ್ವರ ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ:ಮಲೆನಾಡಿನ ಅದರಲ್ಲೂ ಕೆಎಫ್​​ಡಿ ಹಾಟ್ ಸ್ಪಾಟ್ ಪ್ರದೇಶಗಳಾದ ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದವರು ಯಾವುದೇ ಜ್ವರ ಕಾಣಿಸಿಕೊಂಡರೂ ಸಹ ತಕ್ಷಣ ಸಮೀಪದ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಬೇಕು. ಅಲ್ಲಿ ವೈದ್ಯರು ರೋಗಿಯ ಲಕ್ಷಣಗಳನ್ನು ಗಮನಿಸಿ, ರಕ್ತ ಪರೀಕ್ಷೆಗೆ ಸೂಚಿಸಿದರೆ ತಕ್ಷಣ ಪರೀಕ್ಷೆ ಮಾಡಿಸಬೇಕು.

ಕೆಎಫ್​​ಡಿ ಪಾಸಿಟಿವ್ ಕಂಡು ಬಂದರೆ, ವೈದ್ಯರು ಸೂಚಿಸುವ ಔಷಧಗಳನ್ನು ತೆಗೆದುಕೊಂಡರೆ ಯಾವುದೇ ಅಪಾಯವಾಗುವುದಿಲ್ಲ. ಅದನ್ನು ಬಿಟ್ಟು ಕೇವಲ ಜ್ವರ ಎಂದು ತಾವೇ ಮೆಡಿಸನ್ ತೆಗೆದುಕೊಂಡ್ರೆ ಸಾವಿನ ಮನೆಯ ಬಾಗಿಲು ತಟ್ಟಿದಂತೆಯೇ. ಸಾಗರ, ತೀರ್ಥಹಳ್ಳಿ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಈ ಕಾಯಿಲೆಯಿಂದ ಬಳಲುವವರಿಗೆ ಪ್ರತ್ಯೇಕ ವಾರ್ಡ್​ಗಳನ್ನು ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಬೇಕಾದರೆ, ಅವರು ಮಣಿಪಾಲದ ಆಸ್ಪತ್ರೆಗೆ ಹೋಗಿ ದಾಖಲಾಗಬಹುದು.‌

ಲಸಿಕೆ ಇಲ್ಲ, ಬೂಸ್ಟರ್ ಡೋಸ್ ಹಾಗೂ ಮುನ್ನೆಚ್ಚರಿಕೆಯೇ ಮದ್ದು:1957 ರಿಂದಲೂ ಕೆಎಫ್​​ಡಿಗೆ ಚುಚ್ಚುಮದ್ದು ಕಂಡು ಹಿಡಿದಿಲ್ಲ. ಈ ರೋಗ ಸೀಸನ್​ನಲ್ಲಿ ಕಂಡು ಬರುತ್ತದೆ. ಅದನ್ನು ಬಿಟ್ಟರೆ ಮತ್ತೆ ಕಾಣಿಸಿಕೊಳ್ಳುವುದಿಲ್ಲ. ಇದು ಜನವರಿಯಿಂದ ಜೂನ್ ತನಕ ಸುಮಾರು 5 ತಿಂಗಳು ಮಾತ್ರ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಉಣುಗುಗಳು ಹೆಚ್ಚಾಗಿ ಓಡಾಡುತ್ತವೆ. ಮಳೆಗಾಲದಲ್ಲಿ ಜನ ಹಾಗೂ ಜಾನುವಾರು ಕಾಡಿಗೆ ಹೋಗುವುದು ಕಡಿಮೆ. ಇದರಿಂದ ಇದರ ತೀವ್ರತೆ ಇರುವುದಿಲ್ಲ.

ಮಂಗನ ದೇಹದಿಂದ ಹೊರ ಬಂದ ಉಣುಗುಗಳು‌ ಕಾಡಿನಲ್ಲಿನ ಒಣಗಿದ ಎಲೆಗಳ ಕೆಳಗೆ ತಂಪಿನ ಭಾಗದಲ್ಲಿ ವಾಸ ಮಾಡುತ್ತವೆ. ಈ ಉಣುಗುಗಳು ವರ್ಷಗಟ್ಟಲೇ ಆಹಾರವಿಲ್ಲದೆ ಬದುಕುತ್ತವೆ. ಇವು ವಂಶಾಭಿವೃದ್ಧಿ ಮಾಡುವಾಗ ಆಹಾರ ಬಯಸುತ್ತವೆ. ನಂತರ ಅವು ಹಾಗೆ ಆಹಾರವಿಲ್ಲದೆ ಬದುಕುತ್ತವೆ.

ಆರೋಗ್ಯ ಇಲಾಖೆ ನೀಡಿದ ಮುನ್ನೆಚ್ಚರಿಕೆಗಳು:ಕಾಡಿಗೆ ಹೋಗುವವರು ಮೈ ತುಂಬಾ ಬಟ್ಟೆ ಧರಿಸಿ, ಕಾಲಿಗೆ ಶೂ ಹಾಕಿದ್ರೆ ಒಳ್ಳೆಯದು. ಆರೋಗ್ಯ ಇಲಾಖೆ ನೀಡುವ ಡಿಎಂಪಿ ಹಾಗೂ ದೀಪಂ ಆಯಿಲ್​​ಗಳನ್ನು ಕೈ ಕಾಲುಗಳಿಗೆ ಹಚ್ಚಿಕೊಂಡು ಹೋಗಬೇಕು. ಇದರಿಂದ ಉಣುಗುಗಳು ಮನುಷ್ಯನ ಬಳಿಗೆ ಬರುವುದಿಲ್ಲ. ಆಯಿಲ್ 5 ಗಂಟೆಗಳ‌ ಕಾಲ ಕೆಲಸ ಮಾಡುತ್ತದೆ. ಕಳೆದ ಮೂರು ವರ್ಷಗಳಿಂದ ಕೆಎಫ್ ಡಿಗೆ ಲಸಿಕೆ ನೀಡಲಾಗುತ್ತಿದೆ.

ವರ್ಷದ ಪ್ರಾರಂಭ ಜನವರಿಯಲ್ಲಿ ಒಂದು ಲಸಿಕೆ ನೀಡಲಾಗುತ್ತದೆ. ಒಂದು ತಿಂಗಳ ನಂತರ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಬಳಿಕ ಆರು ತಿಂಗಳು ಬಿಟ್ಟು ಇನ್ನೊಂದು ಡೋಸ್ ಲಸಿಕೆ ನೀಡಲಾಗುತ್ತದೆ. ವರ್ಷಕ್ಕೊಂದು ಹೀಗೆ ಐದು ವರ್ಷ ಲಸಿಕೆ ಪಡೆಯಬೇಕು. ಲಸಿಕೆ ಪಡೆದುಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆಗ ಕೆಎಫ್​ಡಿ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ.

ಪ್ರಯೋಗಾಲಯ ಮಂಜೂರು, ಜಾಗ ಗುರುತು ಮಾಡಿಲ್ಲ:2019 ರಲ್ಲಿ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 23 ಜನ ಕೆಎಫ್​​ಡಿಗೆ ಬಲಿಯಾದ ಮೇಲೆ ಎಚ್ಚೆತ್ತ ರಾಜ್ಯ ಸರ್ಕಾರ ಬಜೆಟ್​​ನಲ್ಲಿ ಮಂಗನ ಕಾಯಿಲೆಯ ಸಂಶೋಧನೆ ಹಾಗೂ ಲಸಿಕೆಗಾಗಿಯೇ ಬಯೋ ಸೆಫ್ಟಿ-3 ಪ್ರಯೋಗಾಲಯವನ್ನು ಮಂಜೂರು ಮಾಡಿದೆ.

ಆದರೆ, ಇನ್ನೂ ಸಹ ಪ್ರಯೋಗಾಲಯಕ್ಕೆ ಜಾಗ ಗುರುತು ಮಾಡಿಲ್ಲ. ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಪ್ರಯೋಗಾಲಯವು ಸಾಗರದಲ್ಲಿ ಸ್ಥಾಪನೆಯಾಗಬೇಕೆಂದು ಒತ್ತಾಯ ಮಾಡಿದ್ರೆ, ವೈದ್ಯರು ಹಾಗೂ ಪರಿಣಿತರು ಶಿವಮೊಗ್ಗದಲ್ಲಿಯೇ ಪ್ರಯೋಗಾಲಯ ಇರಬೇಕೆಂಬ ನಿಲುವನ್ನು ಹೊಂದಿದ್ದಾರೆ. ಇದರಿಂದ ಪ್ರಯೋಗಾಲಯ ಇನ್ನೂ ಸ್ಥಾಪನೆಯಾಗಿಲ್ಲ. ಇದರಿಂದ ಮಂಗನಕಾಯಿಲೆ ಅನುಮಾನ ಬಂದ ರಕ್ತದ ಮಾದರಿಯನ್ನು ಪುಣೆಗೆ ಪರೀಕ್ಷೆಗೆ ಕಳುಹಿಸಬೇಕಾಗಿದೆ. ಕೆಎಫ್​ಡಿಗೆ ಇದುವರೆಗೂ ನೂರಾರು ಜನ ಬಲಿಯಾಗಿದ್ದಾರೆ.

ಮಂಗನ ಕಾಯಿಲೆ ತಡೆ, ನಿರ್ವಹಣೆ, ಚಿಕಿತ್ಸೆಗಾಗಿಯೇ ಪ್ರತ್ಯೇಕ ನಿರ್ದೇಶಕರ ನೇಮಕ: ಮಂಗನ ಕಾಯಿಲೆ 2019 ರಲ್ಲಿ ಹೆಚ್ಚಾಗಿ ಕಂಡು ಬಂದ ಕಾರಣ, ಇದರ ನಿಯಂತ್ರಣ, ನಿರ್ವಹಣೆಗಾಗಿಯೇ ಜಿಲ್ಲಾ ಮಟ್ಟದಲ್ಲಿ ಓರ್ವ ನಿರ್ದೇಶಕರನ್ನು ನೇಮಕ‌ ಮಾಡಲಾಗಿದೆ. ಹಾಲಿ ಶಿವಮೊಗ್ಗದ ನಿರ್ದೇಶಕರು ವಿಧಾನಸೌಧದ ಆರೋಗ್ಯ ಇಲಾಖೆಗೆ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಶಿವಮೊಗ್ಗದ ಕೆಎಫ್​ಡಿಯ ಪ್ರಭಾರಿ ನಿರ್ದೇಶಕರಾಗಿ ಡಾ.ಹರ್ಷವರ್ಧನ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆ ಸೇರಿದಂತೆ, ಉತ್ತರ ಕನ್ನಡದ ಸಿದ್ದಾಪುರ ತಾಲೂಕನ್ನು ಸಹ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕೇಸ್​ಗಳ ಜೊತೆ ಸಿದ್ದಾಪುರದ ಕೇಸ್​ಗಳನ್ನು ಶಿವಮೊಗ್ಗದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಜನವರಿಯಿಂದ ಏಪ್ರಿಲ್​ವರೆಗೆ ಕಂಡು ಬಂದ ಪಾಸಿಟಿವ್ ಕೇಸ್​ಗಳ ವಿವರ:

ತೀರ್ಥಹಳ್ಳಿ-29

ಸಾಗರ-04

ಸಿದ್ದಾಪುರ-09 ಪಾಸಿಟಿವ್ ಕೇಸ್​ಗಳು ಕಂಡುಬಂದ ಎಲ್ಲರೂ ಸಹ ಆರೋಗ್ಯವಾಗಿದ್ದಾರೆ.

Last Updated : May 5, 2022, 8:13 PM IST

ABOUT THE AUTHOR

...view details