ಶಿವಮೊಗ್ಗ:ಶಿವಮೊಗ್ಗದ ನಿವೃತ್ತ ಐಎಫ್ಎಸ್ ಅಧಿಕಾರಿ ಐ ಎಂ ನಾಗರಾಜ್ ಅವರ ಮಗಳು ಮೇಘನಾ ಈ ಬಾರಿಯ ಯುಪಿಎಸ್‌ಸಿ 2022- 23ನೇ ಸಾಲಿನಲ್ಲಿ 617 ನೇ ರ‍್ಯಾಂಕ್ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಿವಮೊಗ್ಗದ ವಿವೇಕಾನಂದ ಬಡಾವಣೆಯ ನಿವಾಸಿ ಐ ಎಂ ನಾಗರಾಜ್ ಅವರು ಶಿವಮೊಗ್ಗದ ವನ್ಯಜೀವಿ ವಿಭಾಗದ ಡಿಎಫ್ಒ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಮಗಳು ಮೇಘನಾ ಅವರು 2022- 23ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಎರಡನೇ ಬಾರಿಯಲ್ಲಿ 617 ನೇ ರ‍್ಯಾಂಕ್: ಐ ಎಂ ನಾಗರಾಜ್ ಹಾಗೂ ನಮಿತಾ ಅವರ ಪುತ್ರಿ ಮೇಘನಾ ಅವರು ಶಿವಮೊಗ್ಗದ ಸಾಂದೀಪಿನಿ ಶಾಲೆಯಲ್ಲಿ ಹೈಸ್ಕೂಲ್ ಮುಗಿಸಿ, ಪೇಸ್ (PACE) ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ಮೇಘನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ವಿಫಲರಾಗಿದ್ದರು. ಈಗ ಎರಡನೇ ಬಾರಿಯಲ್ಲಿ 617 ನೇ ರ‍್ಯಾಂಕ್ ಗಳಿಸಿದ್ದಾರೆ.
ಮೊದಲು ಬೆಂಗಳೂರಿನ ಪ್ರತಿಷ್ಟಿತ ಇನ್ಸ್ ಸೈಟ್ಸ್ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದುಕೊಂಡಿದ್ದರು. ಈಗ ಕೋಚಿಂಗ್ ಗೆ ಹೋಗದೇ ನಿತ್ಯ ಗ್ರಂಥಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ತನ್ನ ಸ್ನೇಹಿತೆಯರ ಜೊತೆ ಇದ್ದು ಬೆಂಗಳೂರಿನಲ್ಲಿ ಓದುತ್ತಿದ್ದಾರೆ. ಈ ಬಾರಿಯ ಪರೀಕ್ಷೆ ಇದೇ ತಿಂಗಳು 28 ರಂದು ನಡೆಯಲಿದ್ದು, ಅದಕ್ಕೆ ತಯಾರಿ ನಡೆಸುತ್ತಿದ್ದಾರೆ.
ರ್ಯಾಂಕ್ಗೆ ಐಪಿಎಸ್ ದೊರೆಯುವ ಸಾಧ್ಯತೆ : ಮಗಳ ಸಾಧನೆಗೆ ತಂದೆ ಐ ಎಂ ನಾಗರಾಜ್ ಸಂತಸ ವ್ಯಕ್ತಪಡಿಸಿದ್ದು, ಮಗಳು ಈ ಮಟ್ಟಿಗೆ ಶ್ರೇಯಸ್ಸು ಪಡೆಯಲು ಆಕೆಯ ಕಠಿಣ ಪರಿಶ್ರಮ ಕಾರಣವಾಗಿದೆ. ಆಕೆಗೆ ಈ ಬಾರಿಯ ರ‍್ಯಾಂಕ್ ಐಪಿಎಸ್ ದೊರೆಯುವ ಸಾಧ್ಯತೆ ಇದೆ ಎಂಬ ಅಭಿಲಾಷೆಯನ್ನು ಈ ಟಿವಿ ಭಾರತ್ಗೆ ದೂರವಾಣಿಯ ಮೂಲಕ ತಿಳಿಸಿದ್ದಾರೆ.