ಶಿವಮೊಗ್ಗ: ಬಿ ಎಸ್ ಯಡಿಯೂರಪ್ಪನವರು 2010ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿಶೇಷ ಹಕ್ಕುಗಳ ಭೂಮಿಯನ್ನು ಅರಣ್ಯ ಭೂಮಿ ಎಂದು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ಬಗರ್ ಹುಕುಂ ಸಾಗುವಳಿದಾರರು ಮನೆ, ಮಠ ಕಳೆದುಕೊಂಡು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಆರೋಪಿಸಿದೆ.
ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ 11.02.2010 ಹಾಗೂ 03.05.2010ರಲ್ಲಿ ಎರಡು ಬಾರಿ ಸುತ್ತೋಲೆ ಹೊರಡಿಸಿ, ಸರ್ಕಾರದ ವಿಶೇಷ ಹಕ್ಕುಳ್ಳ ಭೂಮಿಗಳಾದ ಸೊಪ್ಪಿನಬೆಟ್ಟ, ಕಾನು, ಕುಮ್ಕಿ, ಬೆಟ್ಟ, ಜಮ ಬಾಣೆ ಹಾಗೂ ಇನ್ನಿತರ ಭೂಮಿಗಳನ್ನು ಅರಣ್ಯ ಭೂಮಿ ಎಂದು ಹಾಗೂ ಈ ಎಲ್ಲಾ ಭೂಮಿಗಳನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಮಂಜೂರು ಮಾಡಬಾರದು ಎಂದು ಆದೇಶಿಸಿದೆ. ಇದು ಮಲೆನಾಡಿನ ರೈತರಿಗೆ ಮಾರಕವಾಗಿದೆ ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗಡೆ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಹಾಗೂ ಇನ್ನಿತರ ಮಲೆನಾಡಿನ ಜಿಲ್ಲೆಗಳಲ್ಲಿ ಬಡ ರೈತರು ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳೆಲ್ಲ ಈಗ ತಿರಸ್ಕಾರಗೊಂಡಿವೆ.
ಅಷ್ಟೇ ಅಲ್ಲ, ಕರ್ನಾಟಕ ಭೂ ಕಬಳಿಕೆ ವಿಶೇಷ ಕಾಯ್ದೆ 2011ರ ಅಡಿ ಭೂಗಳ್ಳರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಭೂಮಿ ಹಾಗೂ ಮನೆ ಮಾಲೀಕತ್ವ ಕಳೆದುಕೊಂಡು ಜೈಲು ಮತ್ತು ದಂಡದ ಶಿಕ್ಷೆ ಅನುಭವಿಸುವುದು ಅನಿವಾರ್ಯ ಎಂದರು.