ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸ್ಥಳೀಯ ಸರ್ಕಾರ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯಿತಿಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ನಡೆಯುತ್ತಿದೆ. ಮೊದಲ ಹಂತದಲ್ಲಿ ಶಿವಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಗ್ರಾಮ ಸಮರದ ಮತದಾನ ನಡೆಯುತ್ತಿದೆ.
ಮತದಾನಕ್ಕೆ ಗ್ರಾಮೀಣ ಭಾಗದಲ್ಲಿ ಮತದಾರರು ಅತ್ಯಂತ ಉತ್ಸಾಹ ತೋರಿ ಮತದಾನಕ್ಕೆ ಮುಂದಾಗುತ್ತಿದ್ದಾರೆ. ಕೋವಿಡ್ ಹಿನ್ನೆಲೆ ಎಲ್ಲರೂ ಮಾಸ್ಕ್ ಧರಿಸಿ, ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಆರೋಗ್ಯ ಇಲಾಖೆಯವರು ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಮತದಾನಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿದೆ.
ಶಿವಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಮತದಾನ ನಡೆಯುತ್ತಿದೆ. 113 ಗ್ರಾಮ ಪಂಚಾಯಿತಿಗಳ 1,212 ಸ್ಥಾನಗಳಿಗೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಶಿವಮೊಗ್ಗ ತಾಲೂಕಿನಲ್ಲಿ 40 ಗ್ರಾಮ ಪಂಚಾಯತ್ನಲ್ಲಿ 457, ಸ್ಥಾನಗಳಿದ್ದು, 223 ಮತಗಟ್ಟೆಗಳಿವೆ. ಭದ್ರಾವತಿ ತಾಲೂಕಿನಲ್ಲಿ 35 ಗ್ರಾಮ ಪಂಚಾಯಿತಿಗಳ 419 ಸ್ಥಾನಗಳಿದ್ದು, 199 ಮತಗಟ್ಟೆಗಳಿವೆ. ತೀರ್ಥಹಳ್ಳಿಯಲ್ಲಿ 38 ಗ್ರಾಮ ಪಂಚಾಯಿತಿಯ 336 ಸ್ಥಾನಗಳಿದ್ದು, 193 ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.