ಶಿವಮೊಗ್ಗ: ಆಶ್ರಯ ಯೋಜನೆಯಡಿ ಗೋವಿಂದಪುರ ಗ್ರಾಮದಲ್ಲಿ 3 ಸಾವಿರ ಮನೆಗಳ ನಿರ್ಮಾಣಕ್ಕೆ ತಕ್ಷಣ ಟೆಂಡರ್ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರ ಆಶ್ರಯ ಸಮಿತಿ ಸಭೆಯಲ್ಲಿ ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಗೋವಿಂದಪುರದಲ್ಲಿ 3 ಸಾವಿರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 1,836 ಮನೆಗಳ ನಿರ್ಮಾಣಕ್ಕೆ ಪ್ರತಿ ಮನೆಯ ವೆಚ್ಚ 5.85 ಲಕ್ಷ ರೂ.ಗಳಿಗೆ ತಾಂತ್ರಿಕ ಅನುಮೋದನೆ ದೊರೆತಿದೆ. ಸದರಿ ಯೋಜನೆಗಳಿಗೆ ಫಲಾನುಭವಿಗಳ ವಂತಿಗೆಯಿಂದ ಅಂದಾಜು 16 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದಿಂದ 29 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ ಗೋವಿಂದಪುರದ 3 ಸಾವಿರ ಮನೆಗಳಿಗೆ ತಕ್ಷಣ ಟೆಂಡರ್ ಕರೆದು ಲಭ್ಯವಿರುವ ಅನುದಾನದಲ್ಲಿ ಕೆಲಸ ಪ್ರಾರಂಭಿಸುವಂತೆ ಸಚಿವರು ತಿಳಿಸಿದರು.
ರಸ್ತೆ ಮತ್ತಿತರ ಮೂಲಸೌಲಭ್ಯ ಕಲ್ಪಿಸಲು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಜಿ ಪ್ಲಸ್ ಟು ಮಾದರಿಯ ಮನೆಗಳನ್ನು ವಿತರಿಸಲು, ಪ್ರಥಮ ಹಂತದಲ್ಲಿ 4,725 ನಿವೇಶನ ರಹಿತದಾರರನ್ನು ಗುರುತಿಸಲಾಗಿದೆ. ಈ ಪೈಕಿ 2,250 ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಹಣ ಪಾವತಿಸಿದ್ದಾರೆ. ಎರಡನೇ ಹಂತದಲ್ಲಿ 1,370 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪಟ್ಟಿಯನ್ನು ಆದಷ್ಟು ಬೇಗನೆ ಅಂತಿಮಗೊಳಿಸಬೇಕು. ಗೋವಿಂದಪುರದಲ್ಲಿ ಒಂದು ಮಾದರಿ ಮನೆಯನ್ನು ನಿರ್ಮಿಸಲು ಈಗಾಗಲೇ ಸೂಚಿಸಲಾಗಿದೆ. ಆದಷ್ಟು ಬೇಗನೆ ಮಾದರಿ ಮನೆ ನಿರ್ಮಾಣ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.
ವಿರುಪಿನಕೊಪ್ಪ ಗ್ರಾಮದಲ್ಲಿ ಅಡಿಕೆ ಮಂಡಿ ಹಮಾಲರಿಗಾಗಿ ನಿರ್ಮಿಸಿರುವ ಪ್ರದೇಶದಲ್ಲಿ ಉದ್ಯಾನಕ್ಕಾಗಿ ಮೀಸಲಾಗಿರಿಸಿರುವ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 10 ಮನೆಗಳನ್ನು ತಕ್ಷಣ ತೆರವುಗೊಳಿಸುವಂತೆ ಸಚಿವರು ಆದೇಶಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪವಿಭಾಗಾಧಿಕಾರಿ ಪ್ರಕಾಶ್ ಮತ್ತಿತರ ಅಧಿಕಾರಿಗಳು ಹಾಗೂ ಆಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.