ಶಿವಮೊಗ್ಗ: 1995ರ ನಂತರ ಆರಂಭವಾದ ಕನ್ನಡ ಶಾಲಾ ಕಾಲೇಜುಗಳಿಗೆ ಅನುದಾನ ವಿಸ್ತರಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕನ್ನಡ ಶಾಲಾ ಕಾಲೇಜುಗಳಿಗೆ ಅನುದಾನ ವಿಸ್ತರಿಸುವಂತೆ ಆಗ್ರಹ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟಿಸಿದ ಅವರು, ಸ್ವತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರದ ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಹಾಗೂ ಸರ್ಕಾರ ಮಾಡುವ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಆರಂಭಿಸಿ, ಅಕ್ಷರ ದಾಸೋಹ ಜೊತೆಗೆ ಕನ್ನಡ ಶಾಲೆಗಳನ್ನು ಉಳಿಸಿದ ಕೀರ್ತಿ ಖಾಸಗಿ ಶಾಲೆಗಳಿಗೆ ಸಲ್ಲುತ್ತದೆ ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1987 ರಿಂದ 95 ರವರೆಗೆ ಆರಂಭವಾದ 2448 ಖಾಸಗಿ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವ ಮೂಲಕ 23 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕುಟುಂಬಗಳಿಗೆ ಭರವಸೆ ನೀಡಿದ್ದರು. ಅದರಂತೆ 1995 ರ ನಂತರ ಆರಂಭವಾದ ವಿವಿಧ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಭವಿಷ್ಯದ ಭರವಸೆ ಇಲ್ಲದಂತಾಗಿದೆ ಎಂದು ವಿವರಿಸಿದರು.
ಶಾಲಾ-ಕಾಲೇಜುಗಳನ್ನು ಉಳಿಸುವ ಸಲುವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು 1995 ನಂತರ ಆರಂಭವಾದ ಪ್ರಾಥಮಿಕ ,ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಅನುದಾನ ವಿಸ್ತರಿಸುವ ಮೂಲಕ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುತ್ತಿರುವ ಸಿಬ್ಬಂದಿಗಳಿಗೆ ಬದುಕಿನ ಭರವಸೆಯನ್ನು ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.