ಶಿವಮೊಗ್ಗ:ರೈತರಿಗೆ ತೊಂದರೆ ಆಗದಂತೆ ವಿದ್ಯುತ್ ಟಿಸಿ ಸುಟ್ಟರೆ ಅದನ್ನು 24 ಗಂಟೆಯೊಳಗೆ ಟಿಸಿ ಬದಲಾವಣೆ ಮಾಡುವಂತಹ ನಿರ್ಧಾರ ಸೇರಿದಂತೆ ವಿವಿಧ ಹೊಸ ಯೋಜನೆಗಳ ಮೂಲಕ ರಾಜ್ಯದ ವಿದ್ಯುತ್ ಸರಬರಾಜಿನಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‍ಕುಮಾರ್ ಹೇಳಿದ್ದಾರೆ.
ಮಂಡ್ಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೆಸ್ಕಾಂ ನಗರ ವಿಭಾಗೀಯ ಕಚೇರಿ-2ರ ಹಾಗೂ ಘಟಕ-6ರ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ರಾಜ್ಯದ 250 ಕಡೆ ಟಿಸಿ ಬ್ಯಾಂಕ್, 162 ಟಿಸಿ ರಿಪೇರಿ ಕೇಂದ್ರಗಳನ್ನು ತೆರೆಯಲಾಗಿದ್ದು, ಟಿಸಿ ಸುಟ್ಟ 24 ಗಂಟೆಯೊಳಗೆ ಟಿಸಿ ಬದಲಾಯಿಸುವ ಪ್ರಕ್ರಿಯೆಯಲ್ಲಿ ಶೇ.80 ರಿಂದ 90 ರಷ್ಟು ಪ್ರಗತಿ ಸಾಧಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.
ರಾಜ್ಯದಲ್ಲಿ ಕಳೆದ ತಿಂಗಳು ಟ್ರಾನ್ಸ್ಫಾರ್ಮರ್ ನಿರ್ವಹಣೆಗಾಗಿ 10 ದಿನಗಳ ವಿದ್ಯುತ್ ಪರಿವರ್ತಕ ಅಭಿಯಾನ ಕೈಗೊಂಡು ಎಲ್ಲ ಅಧಿಕಾರಿ/ನೌಕರರು ತಮ್ಮ ಸುತ್ತಮುತ್ತ ಇರುವ ಟಿಸಿಗಳನ್ನು ಪರಿಶೀಲಿಸಿ, ರಾಜ್ಯದಲ್ಲಿ ಸುಮಾರು 8 ರಿಂದ 9 ಲಕ್ಷ ಟಿಸಿಗಳ ನಿರ್ವಹಣೆ ಮಾಡುವ ಮೂಲಕ ಹೊಸ ದಾಖಲೆ ಮಾಡಲಾಗಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಸದಸ್ಯರಾದ ಲಕ್ಷ್ಮೀ ಶಂಕರನಾಯ್ಕ, ಕ್ರೀಡಾ ಪ್ರಾಧಿಕಾರದ ಕೆ.ಪಿ ಪುರುಷೋತ್ತಮ್, ಮೆಸ್ಕಾಂ ನಿರ್ದೇಶಕರಾದ ನಂಜುಂಡಸ್ವಾಮಿ, ಗಿರಿರಾಜ್, ದಿನೇಶ್, ಮುಖ್ಯ ಇಂಜಿನಿಯರ್, ಗುತ್ತಿಗೆದಾರರು, ಇತರೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಬಹಿರಂಗ ಚರ್ಚೆಗೆ ಡೇಟ್ ಫಿಕ್ಸ್ ಮಾಡಿದ ಲಕ್ಷ್ಮಣ್: ಜೂ. 29 ಪ್ರತಾಪಸಿಂಹ ಪಟಾಲಂ ಜೊತೆ ಬರಲಿ