ಶಿವಮೊಗ್ಗ:ಆನವಟ್ಟಿಯನ್ನು ನೂತನ ತಾಲೂಕನ್ನಾಗಿ ರಚಿಸಬೇಕು ಎಂದು ಆನವಟ್ಟಿ ನೂತನ ತಾಲೂಕು ರಚನಾ ಹೋರಾಟ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕೆ.ಪಿ.ವೀರೇಶ್, ಸೊರಬ ತಾಲೂಕಿನ ಆನವಟ್ಟಿ ಹೋಬಳಿಯನ್ನು ತಾಲೂಕಾಗಿ ಮಾಡಿ. ಸುಮಾರು 24ಕ್ಕೂ ಹೆಚ್ಚು ಹಳ್ಳಿಗಳು ಇದರ ವ್ಯಾಪ್ತಿಗೆ ಬರುತ್ತವೆ. 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆನವಟ್ಟಿ ಮಧ್ಯದಲ್ಲಿ ಹೆದ್ದಾರಿ ಹಾದುಹೋಗಿದೆ. ವ್ಯಾಪಾರ ಸೇರಿದಂತೆ ಎಲ್ಲಾ ರೀತಿಯ ಸಂಪರ್ಕ ಇಲ್ಲಿದೆ. ಹಾಗಾಗಿ ಆನವಟ್ಟಿ ತಾಲೂಕು ಆಗಬೇಕು ಎಂದರು.
ಆನವಟ್ಟಿಯನ್ನು ತಾಲೂಕಾಗಿ ರಚಿಸಲು ಆಗ್ರಹ ಅಲ್ಲದೇ ಪ್ರವಾಸಿ ತಾಣಗಳಾದ ಕೋಟಿಪುರ, ಕುಬಟೂರು, ಬಂಕಸಾಣ, ಹಿರೇಮಾಗಡಿ, ಮೂಡಿ ಹಾಗೂ ಜಡೆ ಸಂಸ್ಥಾನ ಮಠಗಳಿವೆ. ವ್ಯವಸ್ಥಿತ ಸಂತೆ ಮಾರುಕಟ್ಟೆ ಇದೆ. 21 ಗ್ರಾಮ ಪಂಚಾಯಿತಿಗಳು ಈ ಭಾಗದಲ್ಲಿ ಬರುತ್ತವೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಆನವಟ್ಟಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸಬೇಕೆಂದು ಒತ್ತಾಯಿಸಿದರು.
ಈ ಹೋರಾಟಕ್ಕೆ ಆನವಟ್ಟಿ, ಜಡೆ, ಕುಪ್ಪಗಡ್ಡೆ ಹೋಬಳಿಯ ಎಲ್ಲಾ ಮಠಾಧೀಶರು, ರೈತರು, ವರ್ತಕರು, ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರವಿದೆ. ಇದರ ಜೊತೆಗೆ ಸಾಗರದಿಂದ ಸೊರಬ, ಆನವಟ್ಟಿ, ಆನಗಲ್ ಮೂಲಕ ಹುಬ್ಬಳ್ಳಿ ಸಂಪರ್ಕ ಕೊಡುವ ರೈಲ್ವೆ ವ್ಯವಸ್ಥೆ ಸಹ ಮಾಡಬೇಕು. ಈಗಾಗಲೇ ಹಿರಿಯ ಸಾಹಿತಿ ನಾ.ಡಿಸೋಜ ಅವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ ಎಂದರು.