ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ ಶಂಕಿತ ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲ ಮುಗಿಯುವ ಮೊದಲೇ ವ್ಯಕ್ತಿಯೊಬ್ಬರಿಗೆ ಶಂಕಿತ ಮಂಗನ ಕಾಯಿಲೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೆಎಫ್‍ಡಿ ಲಸಿಕೆ, ಡಿಎಂಪಿ ಆಯಿಲ್ ಎಲ್ಲಾ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ವೈದ್ಯಾಧಿಕಾರಿಗಳ ತಂಡಗಳನ್ನು ರಚಿಸಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಹೇಳಿದರು.
ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ.. ಜ್ಯೋತಿ ಎಸ್ ಕುಮಾರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಮಾತನಾಡಿ, ಎಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಸಾಕಷ್ಟು ಪ್ರಮಾಣದಲ್ಲಿವೆ. ಪ್ರಸ್ತುತ ಸುಮಾರು ಎರಡುಕಾಲು ಲಕ್ಷ ಡೋಸ್ ಲಸಿಕೆ ಲಭ್ಯವಿದ್ದು, ಜುಲೈ ತಿಂಗಳಿನಿಂದ ಈವರೆಗೆ ಒಂದು ಲಕ್ಷಕ್ಕೂ ಅಧಿಕ ಡೋಸ್ ಲಸಿಕೆಗಳನ್ನು ಈ ಪ್ರದೇಶಗಳ ಜನರಿಗೆ ಹಾಕಲಾಗಿದೆ. ಇದೇ ರೀತಿ ಜಿಲ್ಲಾ ಮಟ್ಟದಲ್ಲಿ 45ಸಾವಿರ ಡಿಎಂಪಿ ತೈಲ ಬಾಟಲುಗಳು ಲಭ್ಯವಿದ್ದು, ಪ್ರತಿ ತಾಲೂಕಿನಲ್ಲಿ 6ಸಾವಿರ ಬಾಟಲು ಡಿಎಂಪಿ ಸರಬರಾಜು ಮಾಡಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಸಂಚಾರಿ ವೈದ್ಯಕೀಯ ಘಟಕದ ವ್ಯವಸ್ಥೆಯನ್ನು ಮಾಡಲಾಗುವುದೆಂದರು.
ಇನ್ನು, ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನದಲ್ಲಿರುವ ಆಸ್ಪತ್ರೆಗಳ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕು. 108 ಆ್ಯಂಬುಲೆನ್ಸ್ ಮೂಲಕ ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ದೂರುಗಳಿವೆ. ಇನ್ಮುಂದೆ ಇಂತಹ ದೂರುಗಳು ಬಾರದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಅವರು ತಿಳಿಸಿದರು.
ನೆರೆ ಪರಿಹಾರ ಕಾರ್ಯಗಳಿಗಾಗಿ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರ ಒಂದು ತಿಂಗಳ ಗೌರವಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದೆಂದು ಅಧ್ಯಕ್ಷರು ತಿಳಿಸಿದರು. ಜೊತೆಗೆ, ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಮಾತನಾಡಿ, ಬೆಳೆ ಹಾನಿ ಪರಿಹಾರಕ್ಕೆ ಪ್ರಥಮ ಹಂತದಲ್ಲಿ 9ಕೋಟಿ ರೂ. ಬಿಡುಗಡೆಯಾಗಿದೆ. 15ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಬೆಳೆಹಾನಿ ಸಮೀಕ್ಷೆಯಲ್ಲಿ ಯಾರನ್ನಾದರೂ ಬಿಟ್ಟು ಹೋಗಿದ್ದರೆ ಮತ್ತೆ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದರು.