ಕಾಂಗ್ರೆಸ್ ಜಿಲ್ಲಾ ಮಾಜಿ ಅಧ್ಯಕ್ಷ ತೀ ನಾ ಶ್ರೀನಿವಾಸ್ ಶಿವಮೊಗ್ಗ : ಕಾಂಗ್ರೆಸ್ ಪಕ್ಷ ಪ್ರತಿಪಕ್ಷವಾಗಿ ಸಂಘಟಿತವಾಗಿ ಕೆಲಸ ಮಾಡದ ಕಾರಣ ತಾವು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಕಾಂಗ್ರೆಸ್ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ಮಲೆನಾಡು ರೈತ ಹೋರಾಟ ಸಮಿತಿ ಪ್ರಮುಖ ತಿ ನಾ ಶ್ರೀನಿವಾಸ್ ಅವರು ಘೋಷಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಕೇವಲ ಹಣವಿದ್ದವರಿಗೆ ಮಾತ್ರ ಮಣೆ ಹಾಕುತ್ತಿದೆ. ಕಡಿಮೆ ಜನಸಂಖ್ಯೆ ಇರುವ ಸಮುದಾಯಗಳಿಗೆ, ಹಣವಿಲ್ಲದವರಿಗೆ ಬೆಲೆ ನೀಡುವುದಿಲ್ಲ. ಎಲ್ಲಾ ಪಕ್ಷಗಳು ಚುನಾವಣೆಯನ್ನು ವ್ಯಾಪಾರ ಮಾಡಿಕೊಂಡಿವೆ ಎಂದು ಆರೋಪಿಸಿದರು.
ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸುವುದು ತಮ್ಮ ಗುರಿಯಾಗಿದ್ದು, ಮಲೆನಾಡು ರೈತ ಹೋರಾಟ ಸಮಿತಿಯ ಮೂಲಕ ಹೋರಾಟ ತೀವ್ರಗೊಳಿಸಲಿದ್ದೇನೆ. ಸಾಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದರು.
ಬೇಸತ್ತು ಪಕ್ಷಕ್ಕೆ ರಾಜೀನಾಮೆ - ಶ್ರೀನಿವಾಸ್ :ಕಾಂಗ್ರೆಸ್ ಪ್ರತಿಪಕ್ಷವಾಗಿ ತನ್ನ ಕೆಲಸ ಸರಿಯಾಗಿ ಮಾಡಿಲ್ಲ. ಭಟ್ಟಂಗಿಗಳಿಗೆ ಮಾತ್ರ ಬೆಲೆ ನೀಡುತ್ತಿದೆ. ಹಲವು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದವರನ್ನು ಮೂಲೆ ಗುಂಪು ಮಾಡಿ, ಇತ್ತೀಚಿಗೆ ಪಕ್ಷಕ್ಕೆ ಸೇರಿದವರಿಗೆ ಉನ್ನತ ಹಂತದ ಸ್ಥಾನಮಾನ ನೀಡಿದ್ದಾರೆ ಎನ್ನುವ ಮೂಲಕ ಮಧು ಬಂಗಾರಪ್ಪ ಅವರಿಗೆ ನೀಡಿರುವ ಸ್ಥಾನಮಾನದ ಬಗ್ಗೆ ಪ್ರಶ್ನೆ ಮಾಡಿದರು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ :ಅಭಯಾರಣ್ಯದ ಹೆಸರಿನಲ್ಲಿ, ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ಈ ಕೂಡಲೆ ನಿಲ್ಲಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳ ಈ ಬಗ್ಗೆ ಧ್ವನಿ ಎತ್ತದೆ ಮೌನ ವಹಿಸಿರುವುದು ಖಂಡನೀಯ ಎಂದರು. ಟಿಕೆಟ್ ಅರ್ಜಿ ಸಲ್ಲಿಸಿದವರನ್ನು ಪ್ರತ್ಯೇಕವಾಗಿ ಕರೆದು ಚುನಾವಣೆಯಲ್ಲಿ ಎಷ್ಟು ಹಣ ಖರ್ಚು ಮಾಡುತ್ತೀರಿ ಎಂಬುದನ್ನು ಪ್ರಶ್ನಿಸುತ್ತಾರೆ. ಇದು ರಾಜಕೀಯದಲ್ಲಿ ಉತ್ತಮ ಬೆಳವಣಿಗೆಯಲ್ಲ ಎಂದ ತಿ. ನಾ ಶ್ರೀನಿವಾಸ್, ತಾವು ಯಾರ ಮನವೊಲಿಕೆಗೂ ಯಾವುದೇ ಕಾರಣಕ್ಕೂ ನಿರ್ಧಾರ ಬದಲಿಸುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಜೊತೆ ಪುಟ್ಟಣ್ಣ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ: ಇನ್ನೊಂದೆಡೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಪುಟ್ಟಣ್ಣ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಮತ್ತು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದ ಪುಟ್ಟಣ್ಣ ಬಿಜೆಪಿ ಸರಿಬಾರದ ಕಾರಣ ಬಿಜೆಪಿಗೂ ಗುಡ್ ಬೈ ಹೇಳಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯನಾದ ನಾನು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಪಕ್ಷಕ್ಕೆ ನನ್ನ ವೈಯಕ್ತಿಕ ಕಾರಣಗಳಿಂದ ಇಂದಿನಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ತಾವು ನನ್ನ ರಾಜೀನಾಮೆ ಪತ್ರವನ್ನು ಸ್ವೀಕರಿಸಬೇಕಾಗಿ ಮನವಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ :ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಪುಟ್ಟಣ್ಣ! ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ