ಶಿವಮೊಗ್ಗ:ಭದ್ರಾವತಿ ತಾಲೂಕು ಸುಣ್ಣದಹಳ್ಳಿ ಗ್ರಾಮದ ಅಂತರಘಟ್ಟಮ್ಮ ದೇವಾಲಯದ ಮುಂಭಾಗ ಭಿಕ್ಷುಕಿ ಅಜ್ಜಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಪ್ರಕರಣ ಬೆನ್ನಟ್ಟಿದ ಭದ್ರಾವತಿ ಪೇಪರ್ ಟೌನ್ ಪೊಲೀಸರಿಗೆ ಇದು ಕೊಲೆ ಎಂದು ಸಾಬೀತಾಗಿದ್ದು, ಆರೋಪಿ ಕರುಣಾಕರ ಎಂಬಾತನನ್ನು ಬಂಧಿಸಿದ್ದಾರೆ. ಕೊಲೆಯಾದ ಅಜ್ಜಿಯ ಹೆಸರು ಶಂಕ್ರಮ್ಮ(70).
ಡಿ.3ರಂದು ದೇವಸ್ಥಾನದ ಮುಂದೆ ಭಿಕ್ಷುಕಿ ಅಜ್ಜಿ ಶಂಕ್ರಮ್ಮ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ವೃದ್ಧೆಗೆ ಹತ್ತಿರದ ಬಂಧುಗಳು ಯಾರೂ ಇರದ ಕಾರಣ ತನ್ನ ಆಸ್ತಿಯನ್ನು ಮಾರಾಟ ಮಾಡಿ, ಅಂತರಘಟ್ಟಮ್ಮ ದೇವಾಲಯದ ಮುಂದೆ ಭಿಕ್ಷೆ ಬೇಡಿಕೊಂಡಿದ್ದರು. ಇದು ಕೊಲೆ ಎಂಬುದಕ್ಕೆ ಇಂಬು ನೀಡುವಂತೆ ಅಜ್ಜಿ ಬಳಿ ಇದ್ದ ಹಣ, ಕಿವಿಯೋಲೆ, ಮೂಗುತಿ ಕಾಣೆಯಾಗಿತ್ತು. ಕೊಲೆ ಮಾಡಲಾಗಿದೆ ಎನ್ನುವ ಅನುಮಾನದ ಹಿನ್ನೆಲೆ ಪೊಲೀಸರು, ಅಜ್ಜಿಯ ದೂರದ ಸಂಬಂಧಿಗಳಿಂದ ದೂರು ಪಡೆದು ತನಿಖೆ ಕೈಗೊಂಡಿದ್ದರು.
ದೇವಾಲಯಕ್ಕೆ ಕನ್ನ ಹಾಕಲು ಬಂದವ ಅಜ್ಜಿಯನ್ನು ಕೊಂದ:ಕೊಲೆ ಮಾಡಿದ ವ್ಯಕ್ತಿ ಕರುಣಾಕರ ಮೂಲತಃ ಉಡುಪಿ ಜಲ್ಲೆಯವನು. ಪ್ರಸ್ತುತ ಭದ್ರಾವತಿಯಲ್ಲಿ ವಾಸವಾಗಿರುವ ಈತ ದೇವಾಲಯಗಳ ಹುಂಡಿ ಕಳ್ಳತನ ಮಾಡುತ್ತಿದ್ದವನು. ಅಜ್ಜಿ ಕೊಲೆ ನಡೆದ ದಿನ ಕೂಡ ಈತ ದೇವಾಲಯದ ಹುಂಡಿ ಕಳ್ಳತನ ಮಾಡಲು ಬಂದಿದ್ದನು. ತನ್ನ ಕೋರ್ಟ್ ಖರ್ಚಿಗೆಂದು ದೇವಾಲಯದ ಹುಂಡಿ ಕದಿಯಲು ಬಂದವ ಅಜ್ಜಿ ಮೈಮೇಲಿದ್ದ ಕಿವಿಯೋಲೆ, ಮೂಗುತಿಗಾಗಿ ಆಕೆಯನ್ನೇ ಕೊಲೆ ಮಾಡಿದ್ದನು.
ಸಿಸಿ ಕ್ಯಾಮರಾದಿಂದ ಪತ್ತೆ:ಅಜ್ಜಿ ಕೊಲೆಯಾದ ಸ್ಥಳದಲ್ಲಿ ಯಾವುದೇ ಸುಳಿವು ಸಿಗದಿದ್ದರೂ, ಭಿಕ್ಷುಕಿ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆ ಭಾಗದ ಸಿಸಿ ಕ್ಯಾಮರಾ ಪರಿಶೀಲಿಸಿ ಕೊಲೆಗಾರನನ್ನು ಪತ್ತೆ ಹಚ್ಚಿದ್ದಾರೆ. ಶಂಕ್ರಮ್ಮ ಕೊಲೆಯಾದ ದಿನ ಆ ಕಡೆ ಯಾರು ಹೋಗಿದ್ದಾರೆ ಎಂದು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಓರ್ವ ಕುಂಟುತ್ತಾ ಸಾಗಿರುವುದು ಕಂಡುಬಂದಿದೆ. ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ಆರೋಪಿ ತಾನು ಮಾಡಿದ ಕೃತ್ಯವನ್ನು ಬಾಯಿಬಿಟ್ಟಿದ್ದಾನೆ. ಶಂಕ್ರಮ್ಮನ ಕೊಲೆ ಪ್ರಕರಣದಲ್ಲಿ ಯಾವುದೇ ಸಣ್ಣ ಮಾಹಿತಿ ಇಲ್ಲದಿದ್ದರೂ, ಕೊಲೆಗಾರನನ್ನು ಬಂಧಿಸಿದ ಪೇಪರ್ ಟೌನ್ ಪೊಲೀಸ್ ಠಾಣೆಯ ಪಿಐ ಮಂಜುನಾಥ್ ಮತ್ತು ಅವರ ತಂಡಕ್ಕೆ ಎಸ್ಪಿ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಎರಡು ಪ್ರತ್ಯೇಕ ಪ್ರಕರಣ: ಶಿವಮೊಗ್ಗದಲ್ಲಿ ಪುರುಷ , ಮಹಿಳೆ ಕೊಲೆ