ಶಿವಮೊಗ್ಗ :ಇಂದು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಸಹೋದರ ಸವಾಲ್‌ಗೆ ಆಖಾಡವಾದ ಸೊರಬದಲ್ಲಿ ಬಂಗಾರಪ್ಪ ಸಹೋದರರು ಅಪಾರ ಬೆಂಬಲಿಗರೊಂದಿಗೆ ಅಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿರುವ ಕುಮಾರ ಬಂಗಾರಪ್ಪ ಬೆಳಗ್ಗೆ ಸೊರಬ ಪಟ್ಟಣದ ಪ್ರಸಿದ್ದ ದೇವಾಲಯವಾದ ರಂಗನಾಥ ದೇವಾಲಯದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ದೇವಾಲಯದಿಂದ ಪ್ರಮುಖ ರಸ್ತೆಯಲ್ಲಿ ಸಾಗಿ ತಹಶೀಲ್ದಾರ್ ಕಚೇರಿಯಲ್ಲಿನ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಸುಮಾರು 5 ಸಾವಿರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಇತರರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಕುಮಾರ ಬಂಗಾರಪ್ಪ, ನಾವು ನಮ್ಮ ಅಭಿವೃದ್ದಿಯ ಮೇಲೆ ಮತಯಾಚನೆ ಮಾಡುತ್ತೇವೆ. ಇದರಿಂದ ಸೊರಬ ಅಲ್ಲದೇ ಜಿಲ್ಲೆಯ ಏಳು ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರಲ್ಲಿದ್ದವರು ಯಾರೂ ತೇಲಿ ದಡ ಸೇರಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದರು. ಇವರು ಸಹ ರಂಗನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಿಗರೂಂದಿಗೆ ದೇವಾಲಯದಿಂದ ಬಸ್ ನಿಲ್ದಾಣವರೆಗೂ ಮೆರವಣಿಗೆ ನಡೆಸಿದರು. ತಹಶೀಲ್ದಾರ್ ಕಚೇರಿವರೆಗೂ ನಡೆದುಕೊಂಡು ಆಗಮಿಸಿ ನಾಮಪತ್ರ ಸಲ್ಲಿಸಿದರು. ಮಧು ಬಂಗಾರಪ್ಪನವರ ಸಹೋದರಿ ಗೀತಾ ಶಿವರಾಜ ಕುಮಾರ್ ಸಾಥ್ ನೀಡಿದರು.
ನಂತರ ಮಾತನಾಡಿದ ಮಧು ಬಂಗಾರಪ್ಪ, ಇಂದು ನನ್ನ ನಾಮಪತ್ರ ಸಲ್ಲಿಕೆಗೆ ಇಷ್ಟೊಂದು ಜನ ನಮ್ಮ ತಂದೆ ಬಂಗಾರಪ್ಪನವರ ರೂಪದಲ್ಲಿ ಬಂದು ಆಶೀರ್ವಾದ ಮಾಡಿದ್ದಾರೆ. ನಾನು ಈ ಬಾರಿ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡುತ್ತಿರುವುದು ಸಂತೋಷ ತಂದಿದೆ. ಬೆಳಗಾವಿ, ಹುಬ್ಬಳ್ಳಿಯಲ್ಲಿ ಏನಾಗುತ್ತಿದೆ ಎಂದು ನೀವು ಗಮನಿಸುತ್ತಿದ್ದೀರಿ. ಇದು ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆಯ ಫಲ ಎಂದರು.
ನಂತರ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಮಧು ಪರ ನಾನು ಪ್ರಚಾರ ಮಾಡುತ್ತೇನೆ. ಮಧು ನಮ್ಮ ಕುಟುಂಬದ ಪ್ರೀತಿ ಪಾತ್ರರು. ಏನೇ ಸಮಸ್ಯೆ ಇದ್ದರೂ ಅದಕ್ಕೆ ಸ್ಪಂದಿಸುತ್ತಾರೆ. ನನ್ನ ಪತಿಗೂ ಮಧು ಎಂದರೆ ಅಚ್ಚುಮೆಚ್ಚು. ಮಧು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾನೆ. ಈ ಸಲ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಮಧು ಬಂಗಾರಪ್ಪ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.