ಕರ್ನಾಟಕ

karnataka

ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು.

Submission of nomination
ನಾಮಪತ್ರ ಸಲ್ಲಿಕೆ

By

Published : Apr 20, 2023, 8:21 PM IST

Updated : Apr 20, 2023, 8:41 PM IST

ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸುವ ಭರಾಟೆ ಜೋರಾಗಿಯೇ ನಡೆಯಿತು.

ಶಿವಮೊಗ್ಗ:ವಿಧಾನಸಭೆ ಚುನಾವಣಾ ನಾಮಪತ್ರ ಸಲ್ಲಿಕೆಗಿಂದು ಇಂದು ಕೊನೆಯ ದಿನವಾದ ಕಾರಣ, ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಆಯಾ ವಿಧಾನಸಭೆ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ‌ ಸಲ್ಲಿಸಿದರು. ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು. ಮೊದಲು ಜೆಡಿಎಸ್​ನ ಅಭ್ಯರ್ಥಿ ಆಯನೂರು ಮಂಜುನಾಥ್ ನಾಮಪತ್ರ ಸಲ್ಲಿಸಿದರು.‌ ಆಯನೂರು ಮಂಜುನಾಥ್ ಅವರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಮಾಜಿ ಶಾಸಕ ಶಾರದ ಪೂರ್ಯನಾಯ್ಕ್, ಕಡಿದಾಳ್ ಗೋಪಾಲ ಹಾಗೂ ಚಾಬುಸಾಬ್ ಸಾಥ್ ನೀಡಿದರು.

ಆಯನೂರು ಮಂಜುನಾಥ್ ಮಾತನಾಡಿ, ''ನಾನು ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಅತ್ಯಂತ ಆತ್ಮವಿಶ್ವಾಸದಿಂದ ಚುನಾವಣೆಯಲ್ಲಿ ಗೆಲ್ಲಲು ನಾಮಪತ್ರ ಸಲ್ಲಿಸಿದ್ದೇನೆ. ಶಿವಮೊಗ್ಗದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಅದರ ಅನುಭವ ನಮಗೆ ಆಗುತ್ತದೆ. ಅತ್ಯಂತ ಬಹುಮತದಿಂದ ಪ್ರಾಂತೀಯ ಪಕ್ಷವಾಗಿ ನಾವು ಹೊರಹೊಮ್ಮುತ್ತೇವೆ'' ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ನಾಮಪತ್ರ:ಬಿಜೆಪಿಯ ಅಚ್ಚರಿ ಅಭ್ಯರ್ಥಿ ಚನ್ನಬಸಪ್ಪ ಅವರು, ಕೆ.ಎಸ್.ಈಶ್ವರಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್ ಹಾಗೂ ಶ್ರೀನಾಥ್ ನಗರಗದ್ದೆ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು. ಕೆ.ಎಸ್.ಈಶ್ವರಪ್ಪ ಮಾತನಾಡಿ, ''ಚನ್ನಬಸಪ್ಪನವರು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತ. ಅವರು ದಿಗ್ವಿಜಯ ಸಾಧಿಸಲಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇವೆ'' ಎಂದರು.

''ಚನ್ನಬಸಪ್ಪನವರು ಬಿಜೆಪಿ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನೇರ ಸ್ಪರ್ಧೆ ಇತ್ತು. ಈಗ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಕಳೆದ ಬಾರಿ 40 ಸಾವಿರ ಮತಗಳಿಂದ ಗೆದ್ದಿದ್ದೆವು. ಈ ಚುನಾವಣೆಯಲ್ಲಿ 60 ಸಾವಿರ ಮತಗಳಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ." ಎಂದರು.

ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಮಾತನಾಡಿ, ''ನಮ್ಮ ನಾಯಕರಾದ ಈಶ್ವರಪ್ಪನವರು ಹೇಳಿದಂತೆ 60 ಸಾವಿರ ಮತಗಳಿಂದ ಗೆಲ್ಲುತ್ತೇವೆ. ಈಶ್ವರಪ್ಪನವರು ಸ್ಟಾರ್ ಕ್ಯಾಂಪೇನರ್ ಆಗಿದ್ದು, ಎಲ್ಲ ಕಡೆ ಪ್ರಚಾರಕ್ಕೆ ಹೋಗ್ತಾರೆ. ಅದರಂತೆ ಶಿವಮೊಗ್ಗದಲ್ಲೂ ಸಹ ಪ್ರಚಾರ ನಡೆಸುತ್ತಾರೆ. ಸಂಘಟನೆ ಅಂದ್ರೆ, ಈಶ್ವರಪ್ಪನವರು. ಅವರು ಎಂದೂ ಕೂಡಾ ಸಂಘಟನೆ ಮಾತನ್ನು ಮೀರಲ್ಲ, ನಾವೂ ಮೀರಲ್ಲ.‌ ಶಿವಮೊಗ್ಗದಲ್ಲಿ ಅವರು ಹುಟ್ಟುವ ಮುಂಚೆನೂ ಸಹ ಕೋಮುಗಲಭೆ ನಡೆದಿವೆ. ಅದನ್ನು ಅವರು ಮರೆಯಬಾರದು ಎಂದು ಪರೋಕ್ಷವಾಗಿ ಆಯನೂರು ಮಂಜುನಾಥ್ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನ ಹೆಚ್.ಸಿ.ಯೋಗೀಶ್ ನಾಮಪತ್ರ:ನಾಮಪತ್ರ‌ ಸಲ್ಲಿಸಿದ ಕಾಂಗ್ರೆಸ್​ ಅಭ್ಯರ್ಥಿ ಹೆಚ್.ಸಿ.ಯೋಗೀಶ್ ಮಾತನಾಡಿ, ''ನಾನು ಮೂರು ಭಾರಿ ಪಾಲಿಕೆ ಸದಸ್ಯನಾಗಲು ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ. ಯುವಕನೊಬ್ಬ ಪಕ್ಷಕ್ಕೆ ಒಳ್ಳೆ ಆಸ್ತಿಯಾಗಬಲ್ಲ ಎಂದು ಎಚ್.ಎಸ್.ಸುಂದರೇಶ್, ಆರ್.ಪ್ರಸನ್ನಕುಮಾರ್ ನನ್ನನ್ನು ಕರೆ ತಂದಿದ್ದರು. ಇಷ್ಟು ದಿನ ಪಾಲಿಕೆ ಸದಸ್ಯನಾಗಿ ಇಲ್ಲಿಗೆ ಬರುತ್ತಿದ್ದೆ. ಇಂದು ಕಾಂಗ್ರೆಸ್‌ನಿಂದ ವಿಧಾನಸಭೆಗೆ ನಾಮಪತ್ರ ಸಲ್ಲಿಸಲು ಬಂದಿದ್ದೇನೆ'' ಎಂದರು.

''ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನಮ್ಮ ಜತೆ ಇರುತ್ತಾರೆ. ಬೆಂಬಲ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಜೆಡಿಎಸ್, ಬಿಜೆಪಿ ಪ್ರಬಲ ಅಭ್ಯರ್ಥಿ ಎಂದು ಹೋರಾಟ ಮಾಡುತ್ತಿಲ್ಲ. ಡಿಕೆಶಿ, ಸಿದ್ದರಾಮಯ್ಯ ಕೊಟ್ಟ ಗ್ಯಾರಂಟಿ ಕಾರ್ಡ್ ಮೇಲೆ ಹೋರಾಟ ಮಾಡುತ್ತೇನೆ. ನನ್ನ ಪ್ರಚಾರಕ್ಕೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಬರಲಿದ್ದಾರೆ'' ಎಂದು ಅವರು ಹೇಳಿದರು.

ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ:ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಗೋಣಿ ಮಾಲತೇಶ್ ನಾಮಪತ್ರ ಸಲ್ಲಿಸಿದರು. ಹುಚ್ಚರಾಯ ಸ್ವಾಮಿ ದೇವಾಲಯದಿಂದ ಮೆರವಣಿಗೆ ಹೊರಟು ತಹಶೀಲ್ದಾರ್ ಕಚೇರಿವರೆಗೂ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಿದರು. ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ''ಶಿಕಾರಿಪುರ ತಾಲೂಕಿನ ಜನತೆ ಆರ್ಶೀವಾದ ನನ್ನ ಮೇಲೆ ಇದೆ. ನಾನು ನಮ್ಮ ತಾಲೂಕಿನ ಜನರ ಉತ್ಸಾಹ ನೋಡಿದ್ದೇನೆ. ತಾಲೂಕಿನ ಜನತೆ ಅತ್ಯಧಿಕ ಬಹುಮತದಿಂದ ನನ್ನನ್ನು ಆಯ್ಕೆ ಮಾಡಬಹುದು‌ ಎಂದು ಅವರು ಹೇಳಿದರು. ಸಾಗರದಲ್ಲಿ ಜೆಡಿಎಸ್​​ನಿಂದ ಸಾಗರ ನಗರಸಭೆ ಸದಸ್ಯ ಸೈಯದ್ ಜಾಕೀರ್ ನಾಮಪತ್ರ ಸಲ್ಲಿಸಿದರು. ಇದೇ ಮೊದಲ ಭಾರಿಗೆ ಅಲ್ಪಸಂಖ್ಯಾತರಿಗೆ ಜೆಡಿಎಸ್ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀನಿವಾಸ ಕರಿಯಣ್ಣ ನಾಮಪತ್ರ ಸಲ್ಲಿಸಿದ್ದಾರೆ.

ಗ್ರಾಮಾಂತರ ಮೀಸಲು ಕ್ಷೇತ್ರ:ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಶ್ರೀನಿವಾಸ ಕರಿಯಣ್ಣ ಅವರು ಸಾವಿರಾರು ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಗುರುವಾರ ಬೆಳಗ್ಗೆ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಬಂದ ಶ್ರೀನಿವಾಸ ಕರಿಯಣ್ಣ, ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನ್ನ ಗೆಲುವು ಖಚಿತವಾಗಿದೆ. ಗ್ರಾಮಾಂತರ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಡಳಿತ ಪಕ್ಷದ ಶಾಸಕರು ವಿಫಲರಾಗಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಇಡೀ ಗ್ರಾಮಾಂತರ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ. ಕಾರ್ಯಕರ್ತರು ಅತ್ಯಂತ ಶ್ರಮದಿಂದ ನನ್ನ ಪರ ಕೆಲಸ ಮಾಡುತ್ತಿದ್ದು, ಗೆಲುವು ಖಚಿತ'' ಎಂದರು.

ಇದನ್ನೂ ಓದಿ:ಕಾಂಗ್ರೆಸ್ ಮೂಲಭೂತವಾದಿಗಳನ್ನು ಆಮದು ಮಾಡ್ತಿದೆ: ಸುಧಾಂಶು ತ್ರಿವೇದಿ ಗಂಭೀರ ಆರೋಪ

Last Updated : Apr 20, 2023, 8:41 PM IST

ABOUT THE AUTHOR

...view details