ಶಿವಮೊಗ್ಗ: ಶರಾವತಿ ನದಿಯ ಗರ್ಭದಲ್ಲಿ ಹುದುಗಿ 60 ವರ್ಷಗಳು ಕಳೆದರೂ 'ಮಡೇನೂರು ಅಣೆಕಟ್ಟೆ' ಇಂದಿಗೂ ತನ್ನ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿದೆ. ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಈ ಅಣೆಕಟ್ಟೆ ಮುಳುಗಿ ಹೋಗಿದೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಮಡೇನೂರು ಅಣೆಕಟ್ಟೆ ಮತ್ತೆ ಹೊರ ಜಗತ್ತಿಗೆ ಕಾಣ ಸಿಗುತ್ತಿದೆ. ಇದನ್ನು ಮಡೇನೂರು ಡ್ಯಾಂ, ಹಿರೇಭಾಸ್ಕರ ಡ್ಯಾಂ ಎಂದು ಕರೆಯುತ್ತಾರೆ.
ಅಣೆಕಟ್ಟೆಯ ಇತಿಹಾಸ: ಶರಾವತಿ ನದಿಗೆ ಪ್ರಥಮವಾಗಿ ನಿರ್ಮಿಸಿದ ಅಣೆಕಟ್ಟು ಎಂದರೆ ಅದು ಮಡೇನೂರು ಅಣೆಕಟ್ಟು. 1939ರ ಬ್ರಿಟಿಷರ ಆಳ್ವಿಕೆಯಲ್ಲಿ ಈ ಡ್ಯಾಂ ನಿರ್ಮಾಣ ಮಾಡಲು ಪ್ರಾರಂಭಿಸಿದರು. ಮೈಸೂರಿನ ಪ್ರಸಿದ್ದ ಅರಸರಲ್ಲಿ ಒಬ್ಬರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1939ರ ಫೆಬ್ರವರಿ 5 ರಂದು ಅಡಿಗಲ್ಲು ಹಾಕಿದ್ದರು. ಮೈಸೂರಿನ ಇಂಜಿನಿಯರ್ ಆಗಿದ್ದ ಸುಬ್ಬರಾವ್ ಅವರ ನೇತೃತ್ವದಲ್ಲಿ ಡ್ಯಾಂ ನಿರ್ಮಾಣ ಮಾಡಲಾಯಿತು. ಇದು 114 ಅಡಿ ಎತ್ತರದಲ್ಲಿದೆ. ಇಲ್ಲಿ ಸುಮಾರು 25 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದಾಗಿದೆ.
11 ಸೈಫನ್ ನಿರ್ಮಾಣ: ಈ ಜಲಾಶಯದಲ್ಲಿ 18 ಅಡಿ ವ್ಯಾಸದ 58 ಅಡಿ ಎತ್ತರದ ಒಟ್ಟು 11 ಸೈಫನ್ಗಳಿವೆ. ಸೈಫನ್ಗಳ ನಿರ್ಮಾಣಕ್ಕೆ ಆರ್ಸಿಸಿ ಬಳಸಲಾಗಿದೆ. ಇದರಿಂದ ಸೈಫನ್ ಒಳಗೆ ಯಾವುದೇ ಮರ ಸೇರಿದಂತೆ ಇತರ ವಸ್ತುಗಳು ಸಿಲುಕಿ ಹಾಕಿಕೊಳ್ಳದಂತೆ ಒಳಗೆ ಜಾಲರಿಗಳನ್ನು ಅಳವಡಿಸಲಾಗಿದೆ. ಇಲ್ಲಿ ಪ್ರತಿಯೊಂದು ಸೈಫನ್ನಿಂದ 12 ಕ್ಯೂಸೆಕ್ ನೀರು ಹೊರ ಹೋಗುವಂತೆ ನಿರ್ಮಾಣ ಮಾಡಲಾಗಿದೆ. ಇದು 114 ಅಡಿ ಎತ್ತರ ಹೊಂದಿದ್ದು, ಇಲ್ಲಿ 65.73 ಕ್ಯೂಬಿಕ್ ಅಡಿ ನೀರು ಸಂಗ್ರಹ ಮಾಡಬಹುದಾಗಿದೆ.
1947ರಲ್ಲಿ ಕಾಮಗಾರಿ ಮುಕ್ತಾಯ:ಅಣೆಕಟ್ಟೆಯನ್ನು ಬೆಲ್ಲ, ಮರಳು ಹಾಗೂ ಸುಣ್ಣದಿಂದ ತಯಾರು ಮಾಡಿದ ಗಾರೆಯಿಂದ ನಿರ್ಮಾಣ ಮಾಡಲಾಗಿದೆ. ಈ ಅಣೆಕಟ್ಟೆಯನ್ನು ಮುಖ್ಯವಾಗಿ ಮಹಾತ್ಮ ಗಾಂಧಿ ವಿದ್ಯುತ್ ಗಾರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ನಿರ್ಮಾಣ ಮಾಡಲಾಯಿತು. ಇದಕ್ಕಾಗಿ ಅಣೆಕಟ್ಟೆಯಲ್ಲಿ ಪ್ರತ್ಯೇಕ ಗೇಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಅಣೆಕಟ್ಟೆಯಲ್ಲಿ ಪ್ರವಾಹ ತಪ್ಪಿಸಲು ಹಾಗೂ ಅಣೆಕಟ್ಟೆಗೆ ಅಪಾಯವಾಗದಂತೆ 11 ಸೈಫನ್ ನಿರ್ಮಾಣ ಮಾಡಲಾಗಿದೆ.
ಒಂದೂಂದು ಸೈಫನ್ಗಳು ಸುಮಾರು 18 ಅಡಿ ವ್ಯಾಸ ಹೊಂದಿವೆ. ಮಡೇನೂರು ಡ್ಯಾಂ 1939ರಲ್ಲಿ ಪ್ರಾರಂಭವಾಗಿ 1947 ರ ಮುಕ್ತಾಯವಾಗುತ್ತದೆ. ಮುಕ್ತಾಯವಾದಗಲೇ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಪ್ರಾರಂಭ ಮಾಡಲಾಗುತ್ತದೆ. ಆದರೆ, 1948 ರ ಫೆಬ್ರವರಿಯಲ್ಲಿ ಮಹಾತ್ಮ ಗಾಂಧಿ ವಿದ್ಯುತ್ ಗಾರದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗುತ್ತದೆ.
16ನೇ ವರ್ಷಕ್ಕೆ ಮುಳುಗಡೆ:ಮಡೇನೂರು ಅಣೆಕಟ್ಟೆ ನಿರ್ಮಾಣವಾಗಿ ಸುಮಾರು 16ನೇ ವರ್ಷಕ್ಕೆ ಮುಳುಗಡೆಯಾಗುತ್ತದೆ. 1947ರಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾದಾಗ ಮೈಸೂರು ರಾಜ್ಯವಾಗುತ್ತದೆ. ಈ ವೇಳೆಗಾಗಲೇ ಮೈಸೂರು ರಾಜ್ಯಕ್ಕೆ ಪ್ರಥಮವಾಗಿ 'ಶಿವನ ಸಮುದ್ರ'ದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಗುತ್ತದೆ.