ಶಿಕ್ಷಕನಿಗೆ ಪಲ್ಸರ್ ಬೈಕ್ ಗಿಫ್ಟ್ ಕೊಟ್ಟ ವಿದ್ಯಾರ್ಥಿಗಳು ಶಿವಮೊಗ್ಗ:ಶಿಕ್ಷಕರಿಗೆ ದೇವರ ಸ್ಥಾನಮಾನವಿದೆ. ಸಾಗರ ತಾಲೂಕಿನ ವಳೂರು ಶಾಲೆಯಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಪಲ್ಸರ್ ಬೈಕ್ ಉಡುಗೊರೆ ಕೊಟ್ಟಿದ್ದಾರೆ.
ಸಾಗರ ತಾಲೂಕು ಕೇಂದ್ರದಿಂದ ಸುಮಾರು 80 ಕಿ.ಮೀ ದೂರದ ವಳೂರು ಗ್ರಾಮ ಗುಡ್ಡಗಾಡು ಪ್ರದೇಶದಲ್ಲಿದೆ. ಇದು ದಟ್ಟ ಕಾನನದ ನಡುವಿರುವ ಪುಟ್ಟ ಗ್ರಾಮ. ಇದೀಗ ವರ್ಗಾವಣೆಗೊಂಡಿರುವ ಸಂತೋಷ್ ಕಾಂಚನ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ್ದು ಇದೇ ಗ್ರಾಮದಿಂದ. ಗ್ರಾಮೀಣ ಮಟ್ಟದ ಶಾಲೆಗಳಂದರೆ ಮಾರುದ್ದ ಓಡುವ ಶಿಕ್ಷಕರ ನಡುವೆ, ಸಂತೋಷ್ ತಮ್ಮ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೂ ಅಚ್ಚುಮೆಚ್ಚಿನ ಶಿಕ್ಷಕ.
ವರ್ಗಾವಣೆಗೊಂಡ ಶಿಕ್ಷಕನಿಗೆ ಬೈಕ್ ಉಡುಗೊರೆ ಕುಂದಾಪುರದ ವಾರಾಹಿ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡ ಸಂತೋಷ್ ಕಾಂಚನ್ ಅವರಿಗೆ ಶಾಲಾ ಆವರಣದಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. 16 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಶಿಕ್ಷಕ ಸಂತೋಷ್, ಈ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೂ ನೆರವಾಗಿದ್ದರು. ಶಾಲಾವಧಿ ಮಾತ್ರವಲ್ಲದೆ ಮಕ್ಕಳಿಗೆ ಹಗಲಿರುಳು ಪಾಠ ಮಾಡುತ್ತಿದ್ದರು. ಹಾಗಾಗಿ ಇಲ್ಲಿ ಓದಿದವರು ವಿವಿಧೆಡೆ ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರಿಗೂ ಶಿಕ್ಷಕ ಸಂತೋಷ್ ನೆರವಾಗಿದ್ದರು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಮನ ಗೆದ್ದಿದ್ದ ಅವರ ವರ್ಗಾವಣೆ ಗ್ರಾಮಸ್ಥರ ಹೃದಯವನ್ನು ಭಾರಗೊಳಿಸಿತ್ತು.
ದೂರವಾಣಿಯಲ್ಲಿ ಈಟಿವಿ ಭಾರತ ಜೊತೆ ಮಾತನಾಡಿದ ಶಿಕ್ಷಕ ಸಂತೋಷ್ ಕಾಂಚನ್, ಈ ಬೀಳ್ಕೊಡುಗೆ ಕಾರ್ಯಕ್ರಮ ನನ್ನ ಜೀವನದ ಅವಿಸ್ಮರಣೀಯ ಭಾಗ. 2007ರಲ್ಲಿ ನನ್ನ ವೃತ್ತಿ ಜೀವನ ಪ್ರಾರಂಭವಾಗಿದ್ದೇ ಈ ವಳೂರು ಗ್ರಾಮದಿಂದ. ಗ್ರಾಮಸ್ಥರೆಲ್ಲ ಸೇರಿಕೊಂಡು ಈ ಉಡುಗೊರೆ ನೀಡುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ವಳೂರುಗೆ ಈಗಲೂ ಸರಿಯಾದ ರಸ್ತೆ ಇಲ್ಲ. ಕೇವಲ 20 ಮನೆಗಳನ್ನು ಹೊಂದಿರುವ ಈ ಗ್ರಾಮ, ಈಗಲೂ ಅಭಯಾರಣ್ಯ ಪ್ರದೇಶದಲ್ಲಿದೆ. ಮುಖ್ಯರಸ್ತೆಯಿಂದ 6 ಕಿ.ಮೀ ದೂರುವಿದ್ದು ಅಂದು ನಾನು ತೆಗೆದುಕೊಂಡು ಬಂದಿದ್ದ ಬೈಕ್ ಆಂಬ್ಯುಲೆನ್ಸ್ ರೀತಿ ಓಡಾಡುತ್ತಿತ್ತು. 2012ರಲ್ಲಿ ಗ್ರಾಮಕ್ಕೆ ಕರೆಂಟ್ ಬಂದಿತು. ಮೂಲಭೂತ ಸೌಕರ್ಯದ ಕೊರತೆ ಇನ್ನೂ ಇದೆ. ಗ್ರಾಮದ ಜನ ಬಡ ವರ್ಗದವರು. ಹಾಗಾಗಿ, ಬೀಳ್ಕೊಡುಗೆ ಅಂತಹ ಕಾರ್ಯಕ್ರಮ ಮಾಡಬೇಡಿ ಎಂದಿದ್ದೆ. ಎರಡು ಬಾರಿ ತಿರಸ್ಕರಿಸಿದ್ದೆ. ಆದರೆ, ನಂತರ ಅವರ ಒತ್ತಾಯಕ್ಕೆ ಮಣಿಯಬೇಕಾಯಿತು. ಅವರ ಪ್ರೀತಿಗೆ ಸೋತು ನಾನು ಈ ಬೈಕ್ ಪಡೆದುಕೊಂಡೆ. ಅವರ ಈ ಪ್ರೀತಿಗೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ. ವಳೂರಿನ ಈ ಶಾಲೆಯಲ್ಲಿ 15 ವಿದ್ಯಾರ್ಥಿಗಳಿದ್ದು ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ಊರಿನವರು ಬಯಸಿದರೆ ಭಾನುವಾರವಾದರೂ ಬಂದು ಮಕ್ಕಳಿಗೆ ಬೋಧನೆ ಮಾಡುತ್ತೇನೆ. ಈ ಮೂಲಕ ಊರಿನವರು ಮತ್ತು ಮಕ್ಕಳ ಋಣ ತೀರಿಸುವೆ ಎಂದರು.
ವರ್ಗಾವಣೆಗೊಂಡ ಶಿಕ್ಷಕನಿಗೆ ಬೈಕ್ ಉಡುಗೊರೆ ಗ್ರಾಮಸ್ಥ ಶ್ರೀಧರ್ ಮಾತನಾಡಿ, 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಬೈಕ್ ನಮಗೆ ಸಂಪರ್ಕದ ಕೊಂಡಿಯಾಗಿತ್ತು. ನಮ್ಮ ಎಲ್ಲ ಅವಶ್ಯಕತೆಗಳಿಗೆ ಸಹಾಯವಾಗಿದೆ. ಇಲ್ಲಿ ಓದಿಕೊಂಡ ನಮ್ಮ ಮಕ್ಕಳು ಈಗ ಉನ್ನತ ಅಭ್ಯಾಸಕ್ಕಾಗಿ ಬೇರೆ ಕಡೆ ತೆರಳಿದ್ದಾರೆ. ಇದಕ್ಕೆಲ್ಲ ಶಿಕ್ಷಕ ಸಂತೋಷ್ ಅವರೇ ಕಾರಣ. ಅವರನ್ನು ನಾವು ಯಾವತ್ತೂ ಮರೆಯುವುದಿಲ್ಲ. ಈ ನೆನಪಿಗಾಗಿಯೇ ನಾವೆಲ್ಲ ಸೇರಿ ಹಣ ಸಂಗ್ರಹಿಸಿ ಅವರಿಗೆ ಈ ಬೈಕ್ ನೀಡಿದ್ದೇವೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಇದನ್ನೂ ಓದಿ:'ಯುವನಿಧಿ' ಯೋಜನೆ: ಯುವಜನತೆ ಹೇಳಿದ್ದೇನು?