ಶಿವಮೊಗ್ಗ :ಹೊರ ಗುತ್ತಿಗೆ ರದ್ದುಪಡಿಸಿ ಒಳ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನಿಯೋಜಿಸಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ಸಿಮ್ಸ್ ಆಸ್ಪತ್ರೆ ಎದುರು ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದಿದೆ.
ರಕ್ತದಲ್ಲಿ ಪತ್ರ ಬರೆದ ವಿದ್ಯಾರ್ಥಿ ಸಂಘದ ಸದಸ್ಯರು ವಿದ್ಯಾರ್ಥಿ ಸಂಘದ ಮುಖಂಡ ವಿನಯ್ ರಾಜಾವತ್ ನೇತೃತ್ವದಲ್ಲಿ ಕಾರ್ಮಿಕರು ಇಂದು ರಕ್ತದಲ್ಲಿ ಪತ್ರ ಬರೆದು ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ, ಪುಷ್ಪಾರ್ಚನೆ ಹಾಗೂ ರಕ್ತದಿಂದ ಪಾದಪೂಜೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ರಕ್ತದಲ್ಲಿ ಪತ್ರ ಬರೆದ ವಿದ್ಯಾರ್ಥಿ ಸಂಘದ ಸದಸ್ಯರು ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಬೇಕು, ಇಲ್ಲವಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಇದಕ್ಕೆ ಸಚಿವರು, ಸಂಸದರು ಸಿಮ್ಸ್ ಆಡಳಿತ ಮಂಡಳಿ ಹಾಗೂ ಮುಖ್ಯಮಂತ್ರಿಗಳು ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಕ್ತದಿಂದ ಪಾದಪೂಜೆ ಮಾಡುತ್ತಿರುವ ವಿದ್ಯಾರ್ಥಿ ಸಂಘದ ಸದಸ್ಯರು ಈ ವೇಳೆ ರಕ್ತ ಕ್ರಾಂತಿ ಮಾಡದಂತೆ ಪೊಲೀಸರು ತಡೆದರು. ಇದರಿಂದ ಕಾರ್ಮಿಕರು ಹಾಗೂ ಪೊಲೀಸರ ನಡುವೆ ವಾಗ್ವಾದ ಸಹ ನಡೆಯಿತು. ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ 10ಕ್ಕೂ ಹೆಚ್ಚು ಕಾರ್ಮಿಕರು ಅಸ್ತವ್ಯಸ್ತಗೊಂಡರು. ನಂತರ ಸ್ಥಳದಲ್ಲಿಯೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ವಿವಿಧ ಬೇಡಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿ ಸಂಘ