ಶಿವಮೊಗ್ಗ:ಹೊಸ ವರ್ಷಾಚರಣೆ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಡಿ.31 ರ ರಾತ್ರಿ ಶಿವಮೊಗ್ಗದಾಂದ್ಯತ ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆಯು ಸರ್ಕಾರಿ ನಿಯಮ ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲನೆಗೆ ಖಡಕ್ ಸೂಚನೆ ನೀಡಿದೆ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಅವರು ಮಾರ್ಗಸೂಚಿಯಂತೆ ನಿಯಮ ಪಾಲನೆ ಮಾಡುವಂತೆ ಈಗಾಗಲೇ ತಮ್ಮ ಸಿಬ್ಬಂದಿಗಳ ಜೊತೆ ಹಾಗೂ ಹೋಟೆಲ್, ಕ್ಲಬ್, ರೆಸಾರ್ಟ್ ಸೇರಿದಂತೆ ಆಯೋಜಕರ ಜೊತೆ ಸಭೆ ನಡೆಸಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ಹೇಳಿದ್ದಾರೆ.
ಹೊಸ ವರ್ಷಾಚರಣೆ ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶ:ನಗರದಲ್ಲಿಹೊಸ ವರ್ಷಾಚರಣೆಯನ್ನು ಡಿಸಂಬರ್ 31ರ ಮಧ್ಯರಾತ್ರಿ 1 ಗಂಟೆ ಒಳಗೆ ಮುಕ್ತಾಯಗೊಳಿಸಬೇಕು ಎಂದು ಸೂಚಿಸಲಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳ ಸಂಬವಿಸದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ.
ಆಯೋಜಕರು ಮುಂಜಾಗ್ರತ ಕ್ರಮ ವಹಿಸಬೇಕು: ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸುರಕ್ಷತೆಗಾಗಿ ಮುಂಜಾಗ್ರತ ಕ್ರಮವನ್ನು ಆಯೋಜಕರು ತೆಗೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಹೊಸ ವರ್ಷಾಚರಣೆಯ ಮಾರ್ಗಸೂಚಿಗಳು:ಯಾವುದೇ ಮಾದಕ ವಸ್ತುಗಳನ್ನು ಬಳಸಬಾರದು, ಮದ್ಯ ಮಾರಾಟಕ್ಕೆ 11:30 ತನಕ ಅವಕಾಶ ನೀಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಚಾಲನೆ ಮಾಡುವಂತಿಲ್ಲ, ನಿಗದಿತ ಶಬ್ದ ಮಿತಿಯನ್ನು ಮೀರಿ ಸೌಂಡ್ ಸಿಸ್ಟಂಗಳನ್ನು ಬಳಸುವಂತಿಲ್ಲ, ಸಂಭ್ರಮಾಚರಣೆಗೆ ಬರುವವರಿಗೆ ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಹೋಟೆಲ್, ಕ್ಲಬ್, ರೇಸಾರ್ಟ್ ಗಳಲ್ಲಿ ಆಯೋಜನಕರುಗಳು ಸಂಭ್ರಮಾಚರಣೆ ಮಾಡುವ ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚಿನ ಬಾಗಿಲುಗಳನ್ನು ತೆರೆಯಬೇಕು.