ಕರ್ನಾಟಕ

karnataka

ETV Bharat / state

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಗೆ ಕ್ರಮ: ಶಿವಮೊಗ್ಗ ಡಿಸಿ - shimogga covid rules

ಕೊರೊನಾ ಮುಕ್ತ ದೇಶವನ್ನಾಗಿಸಲು ಸರ್ಕಾರ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಎಲ್ಲಾ ಮಾರ್ಗಸೂಚಿಗಳು ಕಟ್ಟುನಿಟ್ಟಿನಿಂದ ಪಾಲನೆಯಾಗಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

dc k b shivkumar
ಡಿಸಿ ಕೆ ಬಿ ಶಿವಕುಮಾರ್

By

Published : Apr 22, 2021, 10:41 AM IST

ಶಿವಮೊಗ್ಗ: ಎರಡನೇ ಅಲೆ ಕೋವಿಡ್​ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮನವಿ ಮಾಡಿದರು.

ನಿನ್ನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕು ಪೀಡಿತರ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗಿನ ನೈಟ್​ ಕರ್ಫ್ಯೂ ಅವಧಿಯಲ್ಲಿ ಯಾವುದೇ ಚಟುವಟಿಕಗಳಿಗೆ ಅವಕಾಶವಿರುವುದಿಲ್ಲ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಿಕೆಂಡ್​​ ಕರ್ಫ್ಯೂ ಜಾರಿಯಾಗಲಿದ್ದು, ಇದನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವ ಕುರಿತು ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆಗಳನ್ನು ನೀಡಲಾಗಿದೆ. ಜನರು ಮನೆಯ ಒಳಗೆ ಇದ್ದು, ಕೊರೊನಾ ನಿಯಂತ್ರಣದಲ್ಲಿ ಕೈಜೋಡಿಸಬೇಕೆಂದು ತಿಳಿಸಿದರು.

ಡಿಸಿ ಕೆ ಬಿ ಶಿವಕುಮಾರ್

ಜನರು ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸಲು ತಾಲೂಕು ಮಟ್ಟದಲ್ಲಿ ಕಣ್ಗಾವಲು ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ತಹಶೀಲ್ದಾರ್​ಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದೇಹದ ತಾಪಮಾನವನ್ನು ಪರೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹಲವು ತಂಡಗಳನ್ನು ರಚಿಸಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಈ ನೋಡಲ್ ಅಧಿಕಾರಿಗಳು ಪ್ರತಿ ದಿನ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದು, ಅದರ ಆಧಾರದಲ್ಲಿ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದೆ ಎಂದು ಹೇಳಿದರು,

ವ್ಯವಸ್ಥೆ ಸುಧಾರಣೆ:

ಚಿಕಿತ್ಸೆ ಅಗತ್ಯವಿರುವ ಸೋಂಕಿತರನ್ನು ಮೆಗ್ಗಾನ್‍ನಲ್ಲಿ ದಾಖಲು ಮಾಡಲಾಗುತ್ತಿದೆ. ವೈದ್ಯಕೀಯ ನಿಗಾ ಅಗತ್ಯವಿರುವ ವ್ಯಕ್ತಿಗಳಿಗಾಗಿ ಪ್ರಸ್ತುತ ಗಾಜನೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಲ್ಲಿ ವೈದ್ಯರ ನೇತೃತ್ವದ ತಂಡ ರೋಗಿಗಳ ಆರೋಗ್ಯದ ಮೇಲೆ ನಿಗಾ ಇರಿಸಲಿದೆ. ಹೋಂ ಐಸೋಲೇಷನ್‍ನಲ್ಲಿರುವವರ ಮೇಲೆ ನಿಗಾ ಇರಿಸಲು ರ್ಯಾಂಡಮ್ ಆಗಿ ಮನೆಗಳಿಗೆ ಭೇಟಿ ನೀಡಲು ಆರೋಗ್ಯ ಕಾರ್ಯಕರ್ತರ ತಂಡಗಳನ್ನು ರಚಿಸಲಾಗಿದೆ. ಪಾಸಿಟಿವ್ ವ್ಯಕ್ತಿಗಳ ತಪಾಸಣೆ ನಡೆಸಲು ಆಯುರ್ವೇದ ಮಹಾವಿದ್ಯಾಲಯ ಮಾತ್ರವಲ್ಲದೆ ಶಿಕಾರಿಪುರ, ತೀರ್ಥಹಳ್ಳಿ, ಭದ್ರಾವತಿ ಮತ್ತು ಸಾಗರದಲ್ಲಿ ಸೆಂಟರ್​​ಗಳನ್ನು ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್‍ಗಳನ್ನು ಕಾಯ್ದಿರಿಸಲು ಸೂಚನೆ ನೀಡಲಾಗಿದ್ದು, ಪ್ರಸ್ತುತ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 80 ಬೆಡ್‍ಗಳ ಸೌಲಭ್ಯವನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಚುನಾವಣಾ ಪ್ರಚಾರ:

ತೀರ್ಥಹಳ್ಳಿ ಮತ್ತು ಭದ್ರಾವತಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ಯಾವುದೇ ಕಾರಣಕ್ಕೂ ಗುಂಪು ಸೇರಲು ಅವಕಾಶವಿಲ್ಲ. ಕರ್ಫ್ಯೂ ಅವಧಿಯಲ್ಲಿ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಕೊರೊನಾ ಮಾರ್ಗಸೂಚಿ ಪಾಲನೆಗೆ ಹಿರಿಯ IPS ಅಧಿಕಾರಿಗಳ ನಿಯೋಜನೆ

ABOUT THE AUTHOR

...view details