ಶಿವಮೊಗ್ಗ :ಮನೆಯಲ್ಲಿ ಸಾಕಿದ್ದ 30 ನಾಟಿ ಕೋಳಿಗಳ ಪೈಕಿ 12 ಅನ್ನು ಬೀದಿನಾಯಿಗಳು ತಿಂದು ಹಾಕಿರುವ ಘಟನೆ ತಾಲೂಕಿನ ಮತ್ತೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿಂಗಮ್ಮ ಎಂಬುವರು 30 ನಾಟಿ ಕೋಳಿಗಳನ್ನು ಸಾಕಿದ್ದು, ಮನೆಯ ಹಿಂಭಾಗದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ಏಕಾಏಕಿ ಐದಾರು ಬೀದಿ ನಾಯಿಗಳು ಮನೆಯ ಹಿಂಭಾಗದ ತಡೆಗೋಡೆಯನ್ನು ಹಾರಿ ಬಂದು 12 ಕೋಳಿಗಳನ್ನು ಸಂಪೂರ್ಣ ತಿಂದು ಹಾಕಿದ್ದು, ನಾಲ್ಕು ಕೋಳಿಗಳನ್ನು ಅರ್ಧಂಬರ್ಧ ತಿಂದು ಹಾಕಿವೆ. ಇದರಿಂದ ನಿಂಗಮ್ಮ ಅವರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.
ಹೀಗೆ ತಡೆಗೋಡೆ ಹಾರಿ ಕೋಳಿಗಳನ್ನು ತಿಂದ ನಾಯಿಗಳು ಮುಂದೆ ಬೀದಿಯಲ್ಲಿ ಹೋಗುವ ಮಕ್ಕಳನ್ನು ಬಿಡುತ್ತವೆಯೇ? ಎಂಬ ಅನುಮಾನ ವ್ಯಕ್ತವಾಗಿದೆ. ಪರಿಣಾಮ ಅಬ್ಬಲಗೆರೆ ಗ್ರಾಮ ಪಂಚಾಯತಿ ಅವರು ಅದಷ್ಟು ಬೇಗ ನಾಯಿಗಳನ್ನು ಹಿಡಿದು ಬೇರೆ ಕಡೆ ಕಳುಹಿಸಬೇಕೆಂದು ಪಿಡಿಒ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ : ಕಳೆದ ವಾರ ತಾಲೂಕಿನ ಹೊಳೆ ಬೆಳಗಲು ಗ್ರಾಮದಲ್ಲಿ ಶಾಲಾ ಬಸ್ ಇಳಿದು ಬಾಲಕಿ ಮನೆಗೆ ಹೋಗುವಾಗ ಹುಚ್ಚುನಾಯಿ ದಾಳಿ ಮಾಡಿತ್ತು. ಈ ವೇಳೆ ಗ್ರಾಮಸ್ಥರು ನಾಯಿಯನ್ನು ಓಡಿಸಿದ್ದರು. ಗಾಯಗೊಂಡ ಬಾಲಕಿಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ, ಇದೇ ಬೀದಿನಾಯಿ ಅದೇ ಗ್ರಾಮದ ನಾಲ್ಕೈದು ಜನರ ಮೇಲೂ ದಾಳಿ ನಡೆಸಿತ್ತು.
ಇದನ್ನೂ ಓದಿ :ಮನೆ ಮುಂದೆ ಆಟ ಆಡುತ್ತಿದ್ದ ಮಗು ಮೇಲೆ ಬೀದಿನಾಯಿ ದಾಳಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ