ಶಿವಮೊಗ್ಗ: ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ದಡಮಘಟ್ಟ ಗ್ರಾಮದಲ್ಲಿ ನಡೆದಿದೆ. ಸೈಯದ್ ಮದನಿ ನಾಯಿಗಳ ದಾಳಿಗೆ ಬಲಿಯಾದ ಬಾಲಕ.
ಬಾಲಕ ಸೈಯದ್ ಮದನಿಯು ಸಂಜೆ ನಾಲ್ಕು ಗಂಟೆಗೆ ಮನೆಯಿಂದ ಹೊರಗೆ ಆಟವಾಡಲು ಬಂದಾಗ ಏಕಾಏಕಿ ಹತ್ತಾರು ನಾಯಿಗಳು ಒಂದೇ ಸಮನೆ ದಾಳಿ ನಡೆಸಿವೆ. ದಾಳಿಗೆ ಬೆದರಿದ ಮದನಿ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ಎಲ್ಲ ನಾಯಿಗಳು ಆತನನ್ನು ಕಚ್ಚಿ ಹಾಕಿವೆ. ಅಲ್ಲದೇ, ರಸ್ತೆ ತುಂಬೆಲ್ಲಾ ಎಳೆದಾಡಿವೆ.
ತಲೆಯನ್ನು ಸೀಳಿ ಮೆದುಳು ತಿಂದ ನಾಯಿಗಳು: ಬಾಲಕ ಮದನಿ ನಾಯಿಗಳ ದಾಳಿಗೆ ಸಿಲುಕಿ ಕೂಗಿಕೊಂಡರೂ ಸಹ ಮನೆಯವರಿಗೆ ಗೊತ್ತಿಲ್ಲ. ನಾಯಿಗಳು ಏಕಾಏಕಿ ಬೊಗಳುತ್ತಾ ಸಾಗಿವೆ. ಕೊನೆಗೆ ಮನೆಯವರು ಹೊರಗೆ ಬಂದು ನೋಡಿದಾಗ ನಾಯಿಗಳು ಬಾಲಕನನ್ನು ಕಚ್ಚುತ್ತಿರುವುದು ಕಂಡು ಕೋಲು ತೆಗೆದುಕೊಂಡು ಓಡಿಸಿದ್ದಾರೆ. ಅಷ್ಟರಲ್ಲಿ ಕ್ರೂರ ನಾಯಿಗಳು ಬಾಲಕನ ಒಡೆದ ತಲೆಯನ್ನು ಸೀಳಿ ಮೆದುಳನ್ನು ತಿಂದು ಹಾಕಿವೆ.
ತಕ್ಷಣ ಬಾಲಕನನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದು ಕೊಂಡು ಬರುವಾಗ ಬಾಲಕ ಸೈಯದ್ ಮದನಿ ದಾರಿಯಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯಿಗಳ ಹಾವಳಿಗೆ ಕಡಿವಾಣವಿಲ್ಲ:ಬೀದಿ ನಾಯಿಗಳ ಹಾವಳಿ ತಪ್ಪಿಸಿ ಎಂದು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಒಬ್ಬರೇ ಓಡಾಡುವುದು ಸಹ ಕಷ್ಟವಾಗಿದೆ ಎಂದು ಮೃತ ಬಾಲಕ ಸೈಯದ್ ಮದನಿ ದೊಡ್ಡಪ್ಪ ಸೈಯದ್ ಸಾದತ್ 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಇದೇ ರೀತಿ ಓರ್ವ ಬಾಲಕನಿಗೂ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಆತನನ್ನು ಆಸ್ಪತ್ರೆಗೆ ದಾಖಲಿಸಿ ಗುಣಪಡಿಸಿಕೊಂಡು ಹೋಗಲಾಗಿದೆ. ಆದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಓಗಳು ಈ ಬಗ್ಗೆ ಗಮನ ಹರಿಸದ ಪರಿಣಾಮ ನನ್ನ ಸಹೋದರನ ಮಗ ಸಾವನ್ನಪ್ಪಿದ್ದಾನೆ ಎಂದು ಅವರು ದುಃಖ ತೋಡಿಕೊಂಡರು.
ಇದನ್ನೂ ಓದಿ:ಮಗಳನ್ನು ಕಾಲೇಜಿಗೆ ಸೇರಿಸಿ, ವಾಪಸ್ ಆಗುವಾಗ ಲಾರಿ ಡಿಕ್ಕಿ ಹೊಡೆದು ತಂದೆ ಸಾವು: ಭಯಾನಕ ದೃಶ್ಯ ಸೆರೆ