ಶಿವಮೊಗ್ಗ: ನಗರ ಆರೋಗ್ಯ ಕೇಂದ್ರಗಳು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಜನರು ತಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಹೋದರೆ, ಅಲ್ಲಿನ ಸಿಬ್ಬಂದಿಗೆ ಹೆಚ್ಚು ಒತ್ತಡ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಈ ನಗರ ಆರೋಗ್ಯ ಕೇಂದ್ರಗಳು ಸ್ಥಳೀಯವಾಗಿ ಆರೋಗ್ಯ ಸೇವೆ ಒದಗಿಸುತ್ತಿವೆ.
ಶಿವಮೊಗ್ಗದಲ್ಲಿ-8, ಭದ್ರಾವತಿ- 4, ಶಿಕಾರಿಪುರ-1 ಹಾಗೂ ಸಾಗರದಲ್ಲಿ-1 ನಗರ ಆರೋಗ್ಯ ಕೇಂದ್ರ ಸೇರಿ ಒಟ್ಟು 14 ನಗರ ಆರೋಗ್ಯ ಕೇಂದ್ರಗಳು ಜಿಲ್ಲೆಯ ಜನೆತಗೆ ಸೇವೆ ಒದಗಿಸುತ್ತಿವೆ.
ನಗರ ಹಾಗೂ ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳೆಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಈ ವರ್ಷ ಗ್ರಾಮೀಣ ಭಾಗದ 93 ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರ ಎಂದು ಪರಿಗಣಿಸಲಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮಾಭಿವೃದ್ದಿ ಕೇಂದ್ರ ಎಂದು ಪರಿಗಣಿಸಿದಂತಾಗಿದೆ.
ಆರೋಗ್ಯ ಕೇಂದ್ರದ ಜವಾಬ್ದಾರಿಗಳು:
ಜಿಲ್ಲೆಯಲ್ಲಿ ಒಂದು ಪ್ರಾಥಮಿಕ ಕೇಂದ್ರಕ್ಕೆ ಕನಿಷ್ಟ ಮೂರು ಉಪ ಕೇಂದ್ರಗಳಿರುತ್ತವೆ. ಸದ್ಯ 211 ಉಪ ಕೇಂದ್ರಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 12 ಸೇವೆಗಳನ್ನು ನೀಡಬೇಕೆಂದು ತಿಳಿಸಲಾಗಿದೆ. ಆರೋಗ್ಯ ಕೇಂದ್ರದ ಒಪಿಡಿಯಲ್ಲಿ ರೋಗಿಗಳನ್ನು ಪರೀಕ್ಷಿಸಿದ ಬಗ್ಗೆ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು. ಒಪಿಡಿ, ಎನ್ಸಿಡಿ ಕ್ಲಿನಿಕ್ ನಡೆಸಬೇಕು. ಇಲ್ಲಿ 30 ವರ್ಷ ಮೇಲ್ಪಟ್ಟವರನ್ನು ಆರೋಗ್ಯ ಕೇಂದ್ರಕ್ಕೆ ಕರೆತಂದು ಬಿ.ಪಿ., ಶುಗರ್ ಪರೀಕ್ಷೆ ನಡೆಸಬೇಕಿದೆ. ಹಾಗೆಯೇ ಹೆಣ್ಣು ಮಕ್ಕಳಿಗೆ ಗರ್ಭಕೋಶ, ಎದೆ ಭಾಗದಲ್ಲಿ ಗಂಟಾಗುವುದನ್ನು ಪರೀಕ್ಷಿಸಿ ತಿಳಿಸಬೇಕಿದೆ. ಅಲ್ಲದೇ ಈಗ ಚಿಕಿತ್ಸೆಯ ಜತೆಗೆ ಯೋಗ ಕೂಡ ಕಲಿಸಬೇಕಿದೆ.
ಸರ್ಕಾರದಿಂದ ಇ- ಸಂಜೀವಿನಿ ಎರಡು ಅಪ್ಲಿಕೇಷನ್ ಬಿಡುಗಡೆ:
ಇ- ಸಂಜೀವಿನಿ ಆನ್ಲೈನ್ ಅಪ್ಲಿಕೇಷನ್ ಅಗಿದ್ದು, ಓಪಿಡಿಯಲ್ಲಿ ಪರೀಕ್ಷೆ ಮಾಡಿದವರ ವಿವರವನ್ನು ಅಪ್ಲೋಡ್ ಮಾಡಬೇಕು. ಇ- ಸಂಜೀವಿನಿ.ಇನ್ ನಲ್ಲಿ ವೈದ್ಯರು ರೋಗಿಗಳ ಜೊತೆ ಅನ್ಲೈನ್ ಮೂಲಕ ಮಾತನಾಡಬಹುದು.
ಕೊರೊನಾದಿಂದ ಸಾಕಷ್ಟು ಜನರು ಆಸ್ಪತ್ರೆಗೆ ಬರುವುದನ್ನೇ ಬಿಟ್ಟಿದ್ದಾರೆ. ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಈ ಸೇವೆಗಳನ್ನು ಪ್ರಾರಂಭಿಸಲಾಗಿದೆ. ನಗರ ಆರೋಗ್ಯ ಕೇಂದ್ರದಲ್ಲಿ ವಾರದಲ್ಲಿ ಒಂದ ದಿನ ಯೋಗ ತರಬೇತಿ ನೀಡಬೇಕಿದೆ.
ಇ- ಸಂಜೀವಿನಿ ಒಪಿಡಿಯಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರ ಸಹಾಯದ ಮೂಲಕ ಆರೋಗ್ಯ ಸೇವೆ ನೀಡಲಾಗುತ್ತದೆ.