ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ಮುಂದುವರೆಸುವುದನ್ನು ನಿಲ್ಲಿಸಿ ಎಂದು ತಮ್ಮ ಸಹೋದ್ಯೋಗಿ ಸಚಿವರಿಗೆ ಮತ್ತು ಶಾಸಕರಿಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಬದಲಾಯಿಸಿರುವುದು ಸ್ವಾಗತಾರ್ಹ, ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಈ ರೀತಿ ನಡೆದಿತ್ತು. ಈ ಹಿಂದೆ ವಿಜಯಪುರ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ನಾನು ನನ್ನ ಜಿಲ್ಲೆಯಲ್ಲಿಯೇ ಇರಬೇಕೆಂಬ ಧಾಟಿಯ ಮಾತುಗಳನ್ನು ಇಲ್ಲಿಗೇ ನಿಲ್ಲಿಸಿ. ದೇವರ ಪಲ್ಲಕ್ಕಿಯನ್ನ ಎಡಗಡೆ ಹೊತ್ತರೇನು? ಬಲಗಡೆ ಹೊತ್ತರೇನು? ಪಲ್ಲಕ್ಕಿ ಪಲ್ಲಕ್ಕಿನೇ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ಈ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ನನಗೆ ಅದೇ ಜಿಲ್ಲೆ ಬೇಕು, ಇದೇ ಜಿಲ್ಲೆ ಬೇಕೆಂಬ ವಾದ ಬೇಡ. ಆಯಾ ಜಿಲ್ಲೆಯ ಸಂಘಟನೆ ಮತ್ತು ಅಭಿವೃದ್ಧಿಯ ಬಗ್ಗೆ ಉಸ್ತುವಾರಿಗಳು ನೋಡಿಕೊಳ್ಳುತ್ತಾರೆ. ಮಾಧುಸ್ವಾಮಿ ಮತ್ತು ಆರ್. ಅಶೋಕ್ಗೆ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಎಲ್ಲರಿಗೂ ಎಲ್ಲವೂ ಕೊಡಬೇಕೆಂದು ಇಲ್ಲ. ಸರ್ಕಾರದ ಮತ್ತು ಪಕ್ಷದ ಹಿತದೃಷ್ಟಿಯಿಂದ ನಮ್ಮ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಆ ತೀರ್ಮಾನಕ್ಕೆ ಅಶೋಕ್ ಮತ್ತು ಮಾಧುಸ್ವಾಮಿ ಬದ್ಧರಾಗಿರುತ್ತಾರೆ ಎಂದು ಹೇಳಿದರು.
ಪ್ರತಿಪಕ್ಷಗಳಿಗೆ ಸಚಿವ ಈಶ್ವರಪ್ಪ ಕಿವಿಮಾತು: ನಾವು- ನೀವು ನೆಮ್ಮದಿಯಾಗಿ ಒಟ್ಟಾಗಿ ಸೇರಿ ಕೆಲಸ ಮಾಡಿಕೊಂಡು ಹೋಗೋಣ ಎಂದು ಪ್ರತಿಪಕ್ಷಗಳಿಗೆ ಸಚಿವ ಈಶ್ವರಪ್ಪ ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು. ಈ ನಿಟ್ಟಿನಲ್ಲಿ ಸರ್ವ ಪಕ್ಷಗಳ ಸಭೆ ಕರೆಯಲಾಗುತ್ತದೆ. ಸಭೆಗೆ ಬಂದರೆ ಸಂತೋಷ, ಬರದಿದ್ದರೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕೆಂಬ ಅಭಿಲಾಷೆ ಸಿಎಂ ಅವರದ್ದು ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಬಂದ ಶಾಸಕರು ವಾಪಸಾಗುತ್ತಾರೆ ಎಂಬುದು ಶಾಸಕ ಯತ್ನಾಳ್ ಅಭಿಪ್ರಾಯ, ಅದು ಪಕ್ಷದ ಹೇಳಿಕೆ ಅಲ್ಲ ಎಂದರು. ಈ ಬಗ್ಗೆ ಯಾರಾದರೂ ಒಬ್ಬ ಶಾಸಕರು ಹೇಳಿದ್ದಾರಾ? ಅದು ಅವರ ವೈಯುಕ್ತಿಕ ಅಭಿಪ್ರಾಯ. ಯತ್ನಾಳ್ ಮತ್ತು ರೇಣುಕಾಚಾರ್ಯ ಚರ್ಚೆ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಸಭೆ ಯಾರು ಬೇಕಾದರೂ ನಡೆಸಬಹುದು. ನೆಗೆಟಿವ್ ಯೋಚನೆ ಮಾಡುವ ಬದಲು ಪಾಸಿಟಿವ್ ಆಗಿ ಯೋಚಿಸೋಣ ಎಂದರು.
ಇದನ್ನೂ ಓದಿ:ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿಲ್ಲ, ಕಾಂಗ್ರೆಸ್ ಶಾಸಕರೇ ಬಿಜೆಪಿ ಸಂಪರ್ಕದಲ್ಲಿದ್ದಾರೆ : ನಳಿನ್ ಕುಮಾರ್ ಕಟೀಲ್
ಮುಂಬರುವ ಚುನಾವಣೆ ಬಗ್ಗೆ ಚರ್ಚೆ ಮಾಡಿರಬಹುದು. ಎಲ್ಲವೂ ಕೆಟ್ಟದಾಗಿ ಯೋಚನೆ ಮಾಡಿದರೆ ತಪ್ಪಾಗುತ್ತೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಿಜೆಪಿಯವರು ನಮ್ಮ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ, ಸಾಲದಲ್ಲಿಯೇ ಮುಳುಗಿ, ಸಾಲದಲ್ಲಿಯೇ ಏಳುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಸಿಎಂ ಆದಾಗ ವಜ್ರ ವೈಢೂರ್ಯಗಳನ್ನ ರಸ್ತೆಯ ಮೇಲೆ ಮಾರಾಟ ಮಾಡಲಾಗುತ್ತಿತ್ತಾ? ಯಾರೂ ಮನೆಗೆ ಬೀಗ ಹಾಕಲಾಗುತ್ತಿರಲಿಲ್ಲ. ವಿಜಯನಗರ ಸಾಮ್ರಾಜ್ಯವಾಗಿತ್ತಾ? ಈಗ ಮಾತ್ರ ಸಾಲ ಮಾಡಲಾಗುತ್ತಿತ್ತಾ? ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಂದು ರೂ. ಸಾಲ ಮಾಡಿಲ್ವಾ?: ಅವರು ಮುಖ್ಯಮಂತ್ರಿ ಆಗಿದ್ದಾಗ ಒಂದು ರೂಪಾಯಿನೂ ಸಾಲ ಮಾಡಿಲ್ಲವೆಂದು ಹೇಳಲಿ ನೋಡೋಣ. ಸರ್ಕಾರ ಎಂದಾಗ ಸಾಲ ಮಾಡೋದು ಇರುತ್ತೆ, ತೀರಿಸೋದು ಇರುತ್ತೆ. ಸಿದ್ದರಾಮಯ್ಯನಿಗೆ ಪಾಠ ಮಾಡಲು ನಾನು ಎಲ್. ಕೆ.ಜಿ ಟೀಚರ್ ಅಲ್ಲ. ಇಂತಹ ವ್ಯಕ್ತಿಗಳು ಯಾಕೆ ಸೋಲಬೇಕಿತ್ತು. ಯಾಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬೇಕಿತ್ತು. ಸೋತ ಬಳಿಕ ಸಿದ್ದರಾಮಯ್ಯ ಬಹಳ ಪಾಠ ಹೇಳುವ ಕೆಲಸ ಮಾಡ್ತಿದ್ದಾರೆ ಎಂದು ಈಶ್ವರಪ್ಪ ಕುಟುಕಿದರು.
ಕೋವಿಡ್ ಹೋಗುವವರೆಗೂ ತಡೆದುಕೊಳ್ಳಿ, ಪಾದಯಾತ್ರೆ ಮಾಡಿ ತಣ್ಣಗೆ ಮಲಗಿದ್ದ ಮಲ್ಲಿಕಾರ್ಜುನ್ ಖರ್ಗೆಗೆ ಕೋವಿಡ್ ಬರುವ ಹಾಗೆ ಮಾಡಿದ್ದೀರಾ. ಈಗ ಮೇಕೆದಾಟು ಪಾದಯಾತ್ರೆ ಬಿಟ್ಟು ಮಹಾದಾಯಿ ಹಿಡಿದುಕೊಂಡಿದ್ದಾರೆ. ಮಹಾದಾಯಿ ಹೋರಾಟ ನಮ್ಮ ಹೋರಾಟವೆಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಎದೆ ಮುಟ್ಟಿಕೊಂಡು ಹೇಳಲಿ. ಈ ಹಿಂದೆ ಸೋನಿಯಾಗಾಂಧಿ ಅವರು ಗೋವಾ ಚುನಾವಣೆ ಸಂದರ್ಭದಲ್ಲಿ ಮಹಾದಾಯಿಯ ಒಂದು ಹನಿಯನ್ನೂ ಕರ್ನಾಟಕಕ್ಕೆ ನೀಡಲ್ಲ ಅಂದಿದ್ದರು. ಇದನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ಇಲ್ಲವೆಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ