ಶಿವಮೊಗ್ಗ:ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಉಳಿಸಬೇಕಿದೆ ಎಂದು ಸಂಸದ ಬಿ ವೈರಾಘವೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರನ್ನು ತಮಿಳುನಾಡಿಗೆ ಮೊದಲು ಕೊಟ್ಟು, ಕಾಂಗ್ರೆಸ್ ಮುಖಂಡರು ಈಗ ಸಂಸತ್ ಸದಸ್ಯರ ಸಭೆ ನಡೆಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ದ್ವಂದ್ವ ನೀತಿ ಅನುರಿಸುತ್ತಿದೆ. ಕಾವೇರಿ ವಿವಾದ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದ್ರೆ, ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ ಅನುಭವಿಸುತ್ತಿರಲಿಲ್ಲ. ಈಗ ಕೈ ಮೀರಿದ ಪರಿಸ್ಥಿತಿಯಲ್ಲಿ ಕೇಂದ್ರದ ಜಲಸಂಪನ್ಮೂಲ ಸಚಿವ ಶೇಖಾವತ್ ಅವರನ್ನು ಭೇಟಿ ಮಾಡಲು ಬಂದಿದ್ದು, ಸರ್ವ ಪಕ್ಷ ನಿಯೋಗ ಕರೆ ತಂದಿದ್ದು ಇರಬಹುದು ಇವೆಲ್ಲ ತಡವಾಗಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಲಿ: ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. 45 ಟಿಎಂಸಿ ಕುಡಿಯುವ ನೀರು ಬೆಂಗಳೂರಿಗೆ ಬೇಕಾಗುತ್ತದೆ. ಕೃಷಿಗೆ ಬೇಕಾಗುತ್ತದೆ. ಈಗಲಾದರೂ ಸಹ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ಮೋದಿ ಅವರನ್ನು ಟೀಕಿಸುವ ಸಿದ್ದರಾಮಯ್ಯನವರು ತಮಿಳುನಾಡು ಸಿಎಂ ಬಳಿ ಹೋಗಿ ನಮ್ಮ ಪರಿಸ್ಥಿತಿಯನ್ನು ವಿವರಿಸಿ ನೀರು ಬಿಡಲ್ಲ ಎಂದು ತಿಳಿಸಬೇಕಿದೆ ಎಂದು ಹೇಳಿದರು.