ಶಿವಮೊಗ್ಗ :ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಅವರು ಶಿವಮೊಗ್ಗದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗೋಪಾಲಕೃಷ್ಣ ಬೇಳೂರು ಹಿರಿಯ ಶಾಸಕರಿದ್ದಾರೆ. ಬಿಜೆಪಿಯವರಿಗೆ ಯಾರು ಹೆಚ್ಚು ಬೈಯ್ಯುತ್ತಾರೆ ಆ ಬೇಸಿಸ್ ಮೇಲೆ ಪ್ರಮೋಷನ್ ಕೊಡುತ್ತಾರೋ ಏನೋ ಗೊತ್ತಿಲ್ಲ. ನಾನು ಇವರಿಗೆಲ್ಲ ಉತ್ತರ ಕೊಡಲ್ಲ, ನಾನು ಉತ್ತರ ಕೊಡಬೇಕಾಗಿರುವುದು ನನಗೆ ಆಶೀರ್ವಾದ ಮಾಡಿದ ಮತದಾರರಿಗೆ ಮಾತ್ರ ಎಂದರು. ನನಗೆ ಯಾರಿಗೆ ಯಾವ ಸಂದರ್ಭದಲ್ಲಿ ಉತ್ತರ ಕೊಡಬೇಕು ಎಂಬುದು ಗೊತ್ತು. ನಾನು ಆಗ ಉತ್ತರ ನೀಡುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್ನಲ್ಲಿ ನಾನು ಯಾವುದೇ ಭ್ರಷ್ಟಚಾರ ನಡೆಸಿಲ್ಲ:ದೇವರ ದಯೆಯಿಂದ ನನಗೆ ಭ್ರಷ್ಟಾಚಾರ ನಡೆಸುವ ಅವಶ್ಯಕತೆ ಇಲ್ಲ. ನಮಗೆ ಆ ರೀತಿ ಯಾವುದೂ ಗೊತ್ತಿಲ್ಲ. ಭ್ರಷ್ಟಾಚಾರ ನಡೆಸುವ ಅವಶ್ಯಕತೆ ನನಗೆ ಇಲ್ಲ. ಡಿಸಿಸಿ ಬ್ಯಾಂಕ್ ಯಾವ ಯಾವ ಸಂದರ್ಭದಲ್ಲಿ ಏನಾಯ್ತು. ರೈತರ ಹಣ ಏನಾಯ್ತು ಎಂಬುದನ್ನು ಆಯಾ ಇಲಾಖೆಯ ಚೌಕಟ್ಟಿನಲ್ಲಿ ತನಿಖೆ ನಡೆಸುತ್ತಿವೆ. ತನಿಖೆಗಳನ್ನು ಮುಚ್ಚಿ ಹಾಕಲು ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸರ್ಕಾರ ಈಗ ಸಿಓಡಿ ತನಿಖೆ ನಡೆಸುತ್ತಿದೆ. ತನಿಖೆ ನಡೆಸಲಿ. ತಪ್ಪು ಯಾರೇ ಮಾಡಿದರೂ ತಪ್ಪೇ ಎಂದರು. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದನ್ನು ಬಿಟ್ಟು ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣ ನೋಡುವುದು ಸರಿಯಲ್ಲ ಎಂದರು. ಸುಳ್ಳು ಆರೋಪ ಮಾಡುವುದು ಸರಿಯಲ್ಲ.
ವಿಮಾನ ನಿಲ್ದಾಣ ಯಡಿಯೂರಪ್ಪ ಅವರಿಂದಲೇ ಆಗಿದೆ. ಅವರು ಹೇಳಿದ್ದು ಸರಿ ಎಂದು ಹೇಳುವ ಮೂಲಕ ಬೇಳೂರು ಗೋಪಾಲಕೃಷ್ಣ ಅವರಿಗೆ ಟಾಂಗ್ ನೀಡಿದರು.