ಶಿವಮೊಗ್ಗ :ಸಿಎಂ ಯಡಿಯೂರಪ್ಪನವರು ತಮ್ಮ ತವರು ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿ, ಬಯಲು ಸೀಮೆಯ ರೈತರಿಗೆ ಅನುಕೂಲ ಮಾಡಿಕೊಡಲು ಭದ್ರಾ ಮೇಲ್ದಂಡೆಯಿಂದ ರೈತರಿಗೆ ನೀರು ಹರಿಸಲು ಆದೇಶ ಮಾಡಿರುವುದು ಖಂಡನೀಯ. ತಕ್ಷಣ ಆದೇಶವನ್ನು ಹಿಂಪಡೆಯಬೇಕು. ಇಲ್ಲಿದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯ ರೈತ ಸಂಘ ಕಿಡಿ.. ನಗರದಲ್ಲಿ ಪತ್ರಿಕಾ ಭವನದಲ್ಲಿ ರಾಜ್ಯ ರೈತ ಸಂಘ ಮಾಧ್ಯಮಗೋಷ್ಠಿ ನಡೆಸಿತು. ಈ ವೇಳೆ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಭದ್ರಾ ಅಣೆಕಟ್ಟೆಯಲ್ಲಿ ಈ ವರ್ಷ ನಿರೀಕ್ಷಿಸಿದಷ್ಟು ನೀರು ಸಂಗ್ರಹವಾಗಿಲ್ಲ. ಇಂತಹ ಸಮಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದಕ್ಕೆ ಸಿಎಂ ಆದೇಶ ನೀಡಿರುವುದು ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ಮಾಡಿದ ಅನ್ಯಾಯವಾಗಿದೆ.
ಮಳೆ ಬಂದು ಅಣೆಕಟ್ಟೆ ತುಂಬಿದ ಮೇಲೆ ನೀರು ಹರಿಸಲು ನಮ್ಮ ವಿರೋಧವಿಲ್ಲ. ಆದರೆ, ನಮಗೆ ನೀರು ನೀಡದೆ ಮೇಲ್ದಂಡೆ ಯೋಜನೆಗೆ ನೀರು ಹರಿಸುತ್ತಿರುವುದು ಈ ಭಾಗದ ರೈತರಿಗೆ ಮಾಡಿದ ಅನ್ಯಾಯವಾದಂತೆ ಆಗಿದೆ ಎಂದರು.
ಚಿತ್ರದುರ್ಗ, ತುಮಕೂರು ಭಾಗದ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಸಿಎಂ ಬಳಿ ತೆರಳಿ ನೀರು ಹರಿಸುವ ಬೇಡಿಕೆ ಇಟ್ಟಿದ್ದಾರೆ. ಇದರ ಪರಿಣಾಮವಾಗಿ ಸಿಎಂ ನೀರು ಹರಿಸಲು ಆದೇಶ ಮಾಡಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳು ಕೈಕಟ್ಟಿ ಕುಳಿತುಕೊಂಡಿದ್ದಾರೆ. ನೀರು ಹರಿಯಲು ಬಿಟ್ಟು ಈ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ಇದರಿಂದ ಈ ಭಾಗದ ಜನಪ್ರತಿನಿಧಿಗಳು ಸಿಎಂ ಮೇಲೆ ಒತ್ತಡ ಹಾಕಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಹಾಲಿ ಭದ್ರಾ ಅಣೆಕಟ್ಟೆಯಲ್ಲಿ 155.10 ಅಡಿಯಷ್ಟು ಮಾತ್ರ ನೀರಿದೆ. ಅಣೆಕಟ್ಟೆಯ ಗರಿಷ್ಟ ಮಟ್ಟ 186 ಅಡಿಗಳಾಗಿದೆ. ಇದರಿಂದ ಸರ್ಕಾರ ತಕ್ಷಣ ನೀರು ಹರಿಸುವುದನ್ನು ನಿಲ್ಲಿಸದೆ ಹೋದ್ರೆ ಮುಂದೆ ನೀರು ಹರಿಸುವ ಸ್ಥಳಕ್ಕೆ ತೆರಳಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು. ಈ ವೇಳೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, ಶ್ರೀನಿವಾಸ್ ಸೇರಿದಂತೆ ಇತರರಿದ್ದರು.