ಶಿವಮೊಗ್ಗ: ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ. ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ಎಂದು ನಾವು ಪ್ರತಿನಿತ್ಯ ಗುರುವನ್ನು ಪ್ರಾರ್ಥಿಸುತ್ತೇವೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸಿದ ಗುರುಗಳಿಗೆ ರಾಜ್ಯ ಸರ್ಕಾರವು ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ. ಈ ಭಾರಿ ರಾಜ್ಯದಲ್ಲಿ ಹಲವು ಶಿಕ್ಷಕರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದೆ. ಆದರೆ, ಮಲೆನಾಡಿನ ಸಣ್ಣ ಶಾಲೆಯ ಶಿಕ್ಷಕಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಅರಸಿಕೊಂಡು ಬಂದಿದೆ. ಹೊಸನಗರ ತಾಲೂಕು ಮಾದಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಫೌಜಿಯ ಸರವತ್ ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫೌಜಿಯಾ ಸರವತ್ ಕಿರು ಪರಿಚಯ : ಶಿಕ್ಷಕಿ ಫೌಜಿಯ ಸರವತ್ ಅವರು 03-11-1984ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದರು. ತಂದೆ ಪ್ಯಾರಜಾನ್ ತಾಯಿ ಕೌಸರ್ ಫಾತಿಮಾ. ಇವರ ತಾಯಿ ಸರ್ಕಾರಿ ಉದ್ಯೋಗದಲ್ಲಿದ್ದರಿಂದ ವಿವಿಧೆಡೆ ವರ್ಗಾವಣೆಯಾಗುತ್ತಿದ್ದರು. ಇನ್ನು ಫೌಜಿಯಾ ಅವರು ಚಿತ್ರದುರ್ಗ, ದಾವಣಗೆರೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ದಾವಣಗೆರೆಯಲ್ಲಿ ಬಿಎಡ್ ಪದವಿ ಮುಗಿಸಿ, 2007ರಲ್ಲಿ ಶಿಕ್ಷಕಿಯಾಗಿ ಆಯ್ಕೆಗೊಂಡರು. 2007ರಿಂದ 2016ರವರೆಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೇಲುಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ನಂತರ 2016ರಿಂದ 2022ರವರೆಗೆ ತೀರ್ಥಹಳ್ಳಿ ತಾಲೂಕು ಕಲ್ಲು ಗುಡ್ಡ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದರು. 2022ರಿಂದ ಹೊಸನಗರ ತಾಲೂಕು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿಗಳ ವಿವರ: ಫೌಜಿಯ ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು 2020ರಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ. 2021-22ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, 2023ರಲ್ಲಿ ಜಿಲ್ಲಾಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪೌಜಿಯಾ ಅವರು ತಮ್ಮನ್ನು ತಾವು ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಕಲಿ ನಲಿ ಮೂಲಕ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯನ್ನು ಮೂಡಿಸುತ್ತಿದ್ದಾರೆ.