ಶಿವಮೊಗ್ಗ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಸಾಗರ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಕಳೆದ 15 ದಿನಗಳ ಕಾಲ ಅದ್ಧೂರಿಯಾಗಿ ನಡೆದ ಮಾರಿಜಾತ್ರೆಯು ಯಾವುದೇ ಅಪಸ್ವರಕ್ಕೆ ಅವಕಾಶ ನೀಡದೇ ತೆರೆ ಕಂಡಿದೆ. ಬುಧವಾರ ರಾತ್ರಿ ಆರಂಭವಾದ ಶ್ರೀ ಮಾರಿಕಾಂಬ ದೇವಿಯ ವೈಭವಯುತ ರಾಜಬೀದಿ ಉತ್ಸವದ ನಂತರ ಗುರುವಾರ ಬೆಳಗ್ಗೆ ವನಕ್ಕೆ ಬಿಡುವ ಕಾರ್ಯಕ್ರಮದ ಮೂಲಕ ಸಂಪನ್ನಗೊಂಡಿತು.
ಮೊದಲ ದಿನ ತವರು ಮನೆಯಲ್ಲಿದ್ದ ಶ್ರೀ ಮಾರಿಕಾಂಬೆಯನ್ನು ವಿಜೃಂಭಣೆಯಿಂದ ಗಂಡನ ಮನೆಗೆ ಕರೆತರಲಾಯಿತು. ಗಂಡನ ಮನೆಯಲ್ಲಿ ಸುಮಾರು 14 ದಿನಗಳ ಕಾಲ ಪ್ರತಿಷ್ಠಾಪಿಸಲಾಯಿತು. ಇಲ್ಲಿ ದೇವಿಗೆ ಭಕ್ತರು ವಿವಿಧ ಹರಕೆಯನ್ನು ಸಲ್ಲಿಸಿದರು. ನಾಟಿ ಕೋಳಿಯನ್ನು ಹರಕೆ ರೂಪದಲ್ಲಿ ದೇವಿ ಮೇಲೆ ಎಸೆಯಲಾಗುತ್ತದೆ. ಜೊತೆಗೆ ಸೀರೆ, ರವಿಕೆ, ಮಡಿಲ ಅಕ್ಕಿ ಸೇರಿದಂತೆ ಹಣವನ್ನು ಕಾಣಿಗೆ ರೂಪದಲ್ಲಿ ನೀಡಲಾಗುತ್ತದೆ.
ಪ್ರತಿವರ್ಷ ಮಾರಿದೇವಿ ಪ್ರತಿಷ್ಠಾಪನೆಗಾಗಿ ವಿಶೇಷ ಪೆಂಡಾಲ್ ಹಾಕಲಾಗುತ್ತದೆ. ಈ ಬಾರಿ ಸಹ ಪೆಂಡಾಲ್ ಜೊತೆ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸರದಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಪ್ರತಿ ಭಕ್ತರಿಗೂ ದೇವಿಯ ಪಾದ ಸ್ಪರ್ಶ ಮಾಡುವ ಅವಕಾಶ ಕಲ್ಪಿಸಲಾಗಿತ್ತು.
ಇದನ್ನೂ ಓದಿ:ಸಗರ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ; ಮನಸೆಳೆದ ಜಗಜಟ್ಟಿಗಳ ಕಾಳಗ