ಶಿವಮೊಗ್ಗ:ಮುಂದಿನ ವರ್ಷ ಗಾಂಜಾ, ಮಟ್ಕಾ ಹಾಗೂ ಅಕ್ರಮ ಮದ್ಯ ತಡೆಯುವ ಉದ್ದೇಶವನ್ನು ಜಿಲ್ಲಾ ಪೊಲೀಸ್ ಹೊಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಕ್ಷ್ಮೀ ಪ್ರಸಾದ್ ಹೇಳಿದರು.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ತಡೆಯುವ ದೃಷ್ಟಿಯಿಂದ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ. ಗಾಂಜಾ ಜಿಲ್ಲೆಗೆ ಎಲ್ಲಿಂದ, ಹೇಗೆ ಸರಬರಾಜು ಆಗುತ್ತಿತ್ತು ಎಂಬುದರ ಬಗ್ಗೆ ತೀವ್ರವಾಗಿ ತನಿಖೆ ನಡೆಸಿ, ಗಾಂಜಾ ಸರಬರಾಜು ಆಗುವುದನ್ನು ಬಂದ್ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಿಬ್ಬಂದಿ ಕೊರತೆ:ಜಿಲ್ಲೆಯಲ್ಲಿ 32 ಪಿಎಸ್ಐ ಹಾಗೂ 105 ಕಾನ್ಸ್ಟೇಬಲ್ಗಳು ಕೊರತೆ ಇದೆ. ಇವರನ್ನು ಅದಷ್ಟು ಬೇಗ ನೇಮಕ ಮಾಡಿಕೊಳ್ಳಲಾಗುವುದು. ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯಲ್ಲೂ ಸಹ ಸಿಬ್ಬಂದಿ ಕೊರತೆ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹಾಲಿ ಕರ್ತವ್ಯದಲ್ಲಿರುವವರಿಗೆ ಗಲಭೆಯನ್ನು ಹೇಗೆ ನಿಭಾಹಿಸಬೇಕೆಂದು ತರಬೇತಿ ನೀಡಲಾಗುತ್ತಿದೆ. ಮುಂದಿನ ವರ್ಷ ಎಲ್ಲಾ ಕ್ರೈಂಗಳಲ್ಲೂ ಶೇ.10 ರಷ್ಟು ಕಡಿಮೆ ಮಾಡಬೇಕೆಂಬ ಉದ್ದೇಶವಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಅಪರಾಧಗಳಲ್ಲಿ ಅಪ್ರಾಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ:ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಪರಾಧ ಪ್ರಕರಣದಲ್ಲಿ 15 ರಿಂದ 22 ವರ್ಷದೊಳಗಿನ ಅಪ್ರಾಪ್ತರು ಭಾಗಿಯಾಗಿರುವುದು ಹೆಚ್ಚಿದೆ. ಇವರೆಲ್ಲ ಸಣ್ಣ ವಯಸ್ಸಿನಲ್ಲಿಯೇ ಹಣ ನೋಡಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.