ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲಿ ಗರಿಗೆದರಿದ ಕೃಷಿ ಚಟುವಟಿಕೆಗಳು.. 24 ಸಾವಿರ ಹೆಕ್ಟೇರ್ ಭೂಮಿ ಬಿತ್ತನೆ.. - Kannada news paper

ಮುಂಗಾರು 15 ದಿನಗಳ ಕಾಲ ಸತತವಾಗಿ ಸುರಿದ ಪರಿಣಾಮ ಕೃಷಿ ಚಟುವಟಿಕೆಗಳು ಆರಂಭಗೊಂಡಿರಲಿಲ್ಲ. ಇದೀಗ ಮಳೆ ಬಿಡುವು ನೀಡಿದ್ದರಿಂದಾಗಿ ಮಲೆನಾಡಿನ ರೈತರು ತಮ್ಮ ಕಾಯಕದತ್ತ ಗಮನ ಹರಿಸಿದ್ದಾರೆ.

ಮಲೆನಾಡಿನಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

By

Published : Jul 13, 2019, 8:50 PM IST

ಶಿವಮೊಗ್ಗ:ಮಲೆನಾಡಿನಲ್ಲಿ ಕಳೆದ 15 ದಿನಗಳಿಂದ ಬಿಡದೇ ಸುರಿಯುತ್ತಿದ್ದ ಮಳೆರಾಯ ಇದೀಗ ಕೊಂಚ ಬಿಡುವು ನೀಡಿದ್ದಾನೆ. ಮೇ ಅಂತ್ಯದಲ್ಲಿ ಮುಂಗಾರು ಪೂರ್ವ ಮಳೆಯ ಕೊರತೆ ಹಾಗೂ ಜೂನ್ ತಿಂಗಳಲ್ಲಿ ಮುಂಗಾರು ಆರಂಭ ತಡವಾದ ಕಾರಣ ಮಲೆನಾಡಿನಲ್ಲಿ ರೈತರ ಕೃಷಿ ಚಟಿವಟಿಕೆಗಳು ನಿಂತಿದ್ದವು.

ಪ್ರತಿವರ್ಷ ಮಲೆನಾಡಿನಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದ ಪರಿಣಾಮ ಜೂನ್ ಅಂತ್ಯದ ವೇಳೆಗಾಗಲೇ ಬಹುತೇಕ ಕೃಷಿ ಚಟುವಟಿಕಗಳು ಅಂತ್ಯವಾಗುತ್ತಿದ್ದವು. ಆದರೆ, ಈ ಬಾರಿ ಮುಂಗಾರು ಪೂರ್ವ ಮಳೆಯ ಕೊರತೆ ಹಾಗೂ ಜೂನ್ ತಿಂಗಳಲ್ಲಿ ಆರಂಭವಾಗಬೇಕಿದ್ದ ಮುಂಗಾರು ಕೂಡ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿರಲೇ ಇಲ್ಲ.

ನಂತರದಲ್ಲಿ ತಡವಾಗಿ ಆರಂಭಗೊಂಡ ಮುಂಗಾರು 15 ದಿನಗಳ ಕಾಲ ಸತತವಾಗಿ ಸುರಿದ ಪರಿಣಾಮ ಕೃಷಿ ಚಟುವಟಿಕೆಗಳು ಆರಂಭಗೊಂಡಿರಲ್ಲ. ಇದೀಗ ಮಳೆ ಬಿಡುವು ನೀಡಿದ್ದರಿಂದಾಗಿ ಮಲೆನಾಡಿನ ರೈತರು ತಮ್ಮ ಕಾಯಕದತ್ತ ಗಮನ ಹರಿಸಿದ್ದಾರೆ. ಮೆಕ್ಕೆಜೋಳ, ಹತ್ತಿ, ಭತ್ತ, ತೊಗರಿ ಸೇರಿದಂತೆ ಪ್ರಮುಖ ಬೆಳೆಗಳ ಬಿತ್ತನೆ ಆರಂಭವಾಗಿದೆ. ಈ ನಡುವೆ ಮಳೆಯ ಹೆಚ್ಚಳದಿಂದಾಗಿ ಮುಂಗಾರು ಆರಂಭದ ದಿನದಲ್ಲೇ ಬಿತ್ತನೆ ಮಾಡಿದ್ದ ರೈತರು ಸಹ ಮತ್ತೊಮ್ಮೆ ಬಿತ್ತನೆ ಮಾಡುವ ಸಂಕಷ್ಟದಲ್ಲಿದ್ದಾರೆ.

ಮಲೆನಾಡಿನಲ್ಲಿ ಗರಿಗೆದರಿದ ಕೃಷಿ ಚಟುವಟಿಕೆಗಳು

ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿ.ಮೀ ಇದ್ದು, ಈ ಬಾರಿ ಸರಾಸರಿ 125.83 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಈ ಹೊತ್ತಿಗಾಗಲೇ ಬಿತ್ತನೆ ಚಟುವಟಿಕೆ ಶೇ.80ರಷ್ಟು ಪೂರ್ಣಗೊಂಡಿತ್ತು. ಜುಲೈ 20ರವರೆಗೂ ಮೆಕ್ಕೆಜೋಳ ಬಿತ್ತನೆಗೆ ಪ್ರಶಸ್ತವಾಗಿದ್ದು, ರೈತರು ತರಾತುರಿಯಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಸುಮಾರು 24 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಇನ್ನೊಂದೆಡೆ ಕಾಲಾವಕಾಶ ಕೊರತೆಯಿರುವುದರಿಂದ ಅಲ್ಪಾವಧಿ ಬೆಳೆಗಳತ್ತ ರೈತರು ಗಮನ ನೀಡಬೇಕು. ಅಗತ್ಯ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ABOUT THE AUTHOR

...view details