ಶಿವಮೊಗ್ಗ :ಸೊರಬದ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡ ಬೆನ್ನಲ್ಲೇ ತಾವುಗಳು ಕಾಂಗ್ರೆಸ್ ತ್ಯಜಿಸುತ್ತಿರುವುದಾಗಿ ಕಾಂಗ್ರೆಸ್ ಮುಖಂಡ ಚಂದ್ರೇಗೌಡ ಬಾಸೂರು ಹೇಳಿದ್ದಾರೆ.
ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 40 ವರ್ಷಗಳಿಂದ ಬಂಗಾರಪ್ಪ ಅವರ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಬಂಗಾರಪ್ಪ ಅವರಿಗೆ ಕ್ಷೇತ್ರದ ಜನತೆ ಎಲ್ಲಾ ರೀತಿಯ ಅಧಿಕಾರ ನೀಡಿದರೂ 224 ಕ್ಷೇತ್ರಗಳಲ್ಲಿ ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಇಂದಿಗೂ ಹೊರಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೊರಬ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಾಗಿಲ್ಲ. ಪರಿಣಾಮ ಜನ ಉದ್ಯೋಗ ಅರಸಿ ಗುಳೇ ಹೋಗುವುದು ತಪ್ಪಿಲ್ಲ. ಜನರ ಆರ್ಥಿಕ ಸ್ವಾವಲಂಬನೆಗೆ ಯಾವುದೇ ಯೋಜನೆಗಳು ರೂಪಿತವಾಗಿಲ್ಲ. ಪ್ರಮುಖ ನೀರಾವರಿ ಯೋಜನೆ ದಂಡಾವತಿ ನನೆಗುದಿಗೆ ಬಿದ್ದು ಸುಮಾರು ದಶಕಗಳೇ ಕಳೆದಿವೆ.
ಕೊರೊನಾ ಲಾಕ್‍ಡೌನ್ ಮತ್ತಿತರರ ಸಂದರ್ಭದಲ್ಲಿ ಜನ ಸಂಕಷ್ಟದ ಸುಳಿಗೆ ಸಿಲುಕಿದರು. ಈ ವೇಳೆ ಹಾಲಿ ಹಾಗೂ ಮಾಜಿ ಶಾಸಕರು ಜನತೆಗೆ ಸ್ಪಂದಿಸುವ ಕಾರ್ಯ ಮಾಡಲಿಲ್ಲ. ಇದೀಗ ಮಾಜಿ ಶಾಸಕರು ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ತಾಲೂಕಿನಲ್ಲಿ ಸಮಾನ ಮನಸ್ಕರು ಸೇರಿ ಎನ್‍ಡಿಎ ಎಂಬ ಸಂಘಟನೆಯ ಮೂಲಕ ಜಿಲ್ಲಾ ಪಂಚಾಯತ್ ಚುನಾವಣೆ ಎದುರಿಸಿ, 4 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದೆವು.
ನಾವು ಮೂಲತಃ ಜೆಡಿಎಸ್‍ನವರಾಗಿದ್ದು, ಪುನಃ ಜೆಡಿಎಸ್ ಸೇರ್ಪಡೆಯಾಗುವ ಇಚ್ಛೆಯಿದೆ. ಈ ಕುರಿತು ಸ್ಥಳೀಯ ಮುಖಂಡರೊಂದಿಗೆ ಸಮಾಲೋಚಿಸಲಾಗುವುದು. ಜೆಡಿಎಸ್ ವರಿಷ್ಠರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗುವ ಉದ್ದೇಶವಿದೆ. ನಂತರದಲ್ಲಿ ಅಧಿಕೃತ ಜೆಡಿಎಸ್ ಸೇರ್ಪಡೆ ಅಥವಾ ನೂತನ ಸಂಘಟನೆ ಸ್ಥಾಪಿಸುವ ಕುರಿತು ತಿಳಿಸಲಾಗುವುದು ಎಂದರು.
ಇದನ್ನೂ ಓದಿ:ಬೆಂಗಳೂರಲ್ಲಿ ಕೋವಿಡ್ ಪ್ರಕರಣ ಇಳಿಮುಖ: ಮಂಜುನಾಥ್ ಪ್ರಸಾದ್