ಶಿವಮೊಗ್ಗ: ಸಂತ್ರಸ್ತರಿಗೆ ಹಕ್ಕು ಪತ್ರ ನೀಡದಿದ್ದರೆ ವಿಮಾನ ನಿಲ್ದಾಣ ಬಳಿಯೇ ಧರಣಿ ಮಾಡಬೇಕಾಗುತ್ತದೆ ಎಂದು ಸೋಗಾನೆ ಭೂಹಕ್ಕು ಸಂತ್ರಸ್ತರ ಹೋರಾಟ ಸಮಿತಿ ಮತ್ತು ಮಲೆನಾಡು ರೈತರ ಹೋರಾಟ ಸಮಿತಿ ತಿಳಿಸಿದೆ. ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖರಾದ ತೀ.ನ.ಶ್ರೀನಿವಾಸ್ ಮತ್ತು ಎಂ.ಬಿ.ಕೃಷ್ಣಪ್ಪ, ರಾಜ್ಯ ಸರ್ಕಾರ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟವರನ್ನು ನಿರ್ಲಕ್ಷಿಸಿದೆ. ಹಕ್ಕು ಪತ್ರ ಕೊಡುತ್ತೇವೆ ಎಂದರು, ನಿವೇಶನ ನೀಡುತ್ತೇವೆ ಎಂದಿದ್ದರು. ಹುಬ್ಬಳ್ಳಿ ಮಾದರಿಯಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸುತ್ತೇವೆ ಎಂದಿದ್ದರು. ಆದರೆ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಸುಳ್ಳು ಹೇಳುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರೈತರ ಅಲೆದಾಟ ತಪ್ಪಿಲ್ಲ ಎಂದು ದೂರಿದರು.
ರನ್‌ವೇ ಜಾಸ್ತಿ ಮಾಡಲು ರೈತರು ಮತ್ತಷ್ಟು ಭೂಮಿ ಕೊಟ್ಟಿದ್ದರು. ಸರ್ಕಾರ ಇದಕ್ಕಾಗಿ 10 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣ ಡಿಸಿ ಖಾತೆಯಲ್ಲಿದೆ. ಆದರೆ ಅಧಿಕಾರಿಗಳು ಅದನ್ನು ನೀಡದೇ ಈ ಭೂಮಿ ನಿಮ್ಮದಲ್ಲ ಸರ್ಕಾರದ್ದು ಎಂದು ರೈತರ ವಿರುದ್ಧವೇ ಕೇಸು ಹಾಕಿದ್ದಾರೆ. 400 ಜನರಿಗೆ ನಿವೇಶನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ವಿಮಾನ ನಿಲ್ದಾಣ ಉದ್ಘಾಟನೆಗೆ ಮೊದಲು ನಿಮಗೆ ನಿವೇಶನದ ಹಕ್ಕುಪತ್ರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆ ಭರವಸೆ ಈಗ ಹುಸಿಯಾಗಿದೆ ಎಂದರು.