ಶಿವಮೊಗ್ಗ: ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಬಳಿಕ ಆರೋಪಿಗಳನ್ನು ಪೊಲೀಸರು ಒಂದು ದಿನದೊಳಗೆ ಬಂಧಿಸಿ ಜೈಲಿಗಟ್ಟಿದ್ದರು. ಇದಾದ ಬಳಿಕ ಹರ್ಷ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮುಸ್ಲಿಂ ಯುವಕನ ಹತ್ಯೆಗೆ ಸ್ಕೆಚ್ ರೂಪಿಸಿದ್ದ ತಂಡದ ಬಗ್ಗೆ ಮಾಹಿತಿ ಪಡೆದ ಪೊಲೀಸರು 13 ಜನರನ್ನು ಬಂಧಿಸಿದ್ದರು. ಇದಾಗಿ ಕೆಲ ದಿನ ಕಳೆಯುವುದರೊಳಗಾಗಿ ಬಜರಂಗದಳದ ಕಾರ್ಯಕರ್ತನನ್ನು ಹತ್ಯೆ ಮಾಡಲು ಸ್ಕೆಚ್ ರೂಪಿಸಿದ್ದ ಮೂವರು ಯುವಕರನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ಹತ್ಯೆಗೆ ಡೇಟ್ ಫಿಕ್ಸ್: ಬಜರಂಗದಳದ ಕಾರ್ಯಕರ್ತನನ್ನು ಹತ್ಯೆ ಮಾಡಲು ಶಿವಮೊಗ್ಗದ ಅನ್ಯಕೋಮಿನ ಮೂವರು ಯುವಕರು ಸ್ಕೆಚ್ ರೂಪಿಸಿದ್ದರು. ಕಾರ್ಯಕರ್ತನ ಹತ್ಯೆಗೆ ಡೇಟ್ ಫಿಕ್ಸ್ ಮಾಡಿ ಬೆಳಗ್ಗಿನಿಂದಲೇ ಆತನನ್ನು ಹಿಂಬಾಲಿಸಲಾರಂಭಿಸಿದ್ದರು. ಆದರೆ, ಕಾರ್ಯಕರ್ತ ಆ ದುಷ್ಕರ್ಮಿಗಳಿಗೆ ಸಿಕ್ಕಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ದುಷ್ಕರ್ಮಿಗಳು ಕಾರ್ಯಕರ್ತನ ತಮ್ಮನನ್ನು ಅಡ್ಡಗಟ್ಟಿ ಅವನಿಗೆ ಲಾಂಗ್, ಭರ್ಜಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಜೊತೆಗೆ ನಿನ್ನ ಅಣ್ಣನನ್ನು ಇಂದು ರಾತ್ರಿಯ ಒಳಗಾಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.