ಜಾತ್ರೆಗೆ ನಟ ಶಿವರಾಜ್ಕುಮಾರ್ ದಂಪತಿ ಆಗಮಿಸಿದ ಸಂದರ್ಭ ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪನವರ ತವರು ಗ್ರಾಮ ಕುಬಟೂರು ಗ್ರಾಮದಲ್ಲಿ 9 ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿ ಜಾತ್ರೆಗೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಅವರು ಆಗಮಿಸಿ ದೇವಿ ದರ್ಶನ ಪಡೆದರು. 9 ವರ್ಷಕ್ಕೊಮ್ಮೆ ಜರುಗುವ ಜಾತ್ರೆಯಾದ ಕಾರಣ ಮದು ಬಂಗಾರಪ್ಪನವರ ಮನೆಗೆ ಎಲ್ಲಾ ಸಹೋದರಿಯರು ತಮ್ಮ ಕುಟುಂಬ ಸಮೇತ ಆಗಮಿಸಿದ್ದರು. ದೇವಿಯ ರಥೋತ್ಸವದ ದಿನ ಮಧು ಬಂಗಾರಪ್ಪ ತಮ್ಮ, ಸಹೋದರಿಯರ ಪುತ್ರಿಯರೊಂದಿಗೆ ಹಾಡಿಗೆ ಸ್ಟೆಪ್ ಹಾಕಿದರು. ಅವರ ಸಹೋದರಿ ಪುತ್ರನಂತೂ ತಮ್ಮ ತಾತನಂತಯೇ ಡೊಳ್ಳು ಬಾರಿಸಿ ಹಬ್ಬವನ್ನು ಎಂಜಾಯ್ ಮಾಡಿದರು.
ದ್ಯಾಮವ್ವ ದೇವಿ ಗುಡಿಗೆ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ , ದಿ ಮೈಸೂರು ಪ್ರಿಂಟರ್ಸ್ ನ ಮಾಲೀಕರಾದ ತಿಲಕ್ ಕುಮಾರ್ ಅವರ ಕುಟುಂಬದವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದಲ್ಲಿನ ಸಂಪ್ರದಾಯ ಜಾತ್ರೆಗೆ ಪ್ರತಿ ಮನೆಯಿಂದ ಕಾಣಿಕೆ ನೀಡುವುದು ವಾಡಿಕೆ. ಅದರಂತೆ ಮಧು ಬಂಗಾರಪ್ಪನವರು ಕಾಣಿಕೆ ಅರ್ಪಿಸಿದಂತೆಯೇ ನಟ ಶಿವರಾಜ್ ಕುಮಾರ್ ಹಾಗೂ ತಿಲಕ್ ಕುಮಾರ್ ಕುಟುಂಬದಿಂದ ದೇವಿ ಜಾತ್ರೆಗೆ 5 ಲಕ್ಷ ರೂ. ನೀಡಿದರು.
ಪ್ರತಿ 9 ವರ್ಷಕ್ಕೊಮ್ಮೆ ಜರುಗುವ ಜಾತ್ರೆಗೆ ನಾವೆಲ್ಲಾ ಬಂದು ದೇವಿ ದರ್ಶನ ಪಡೆದಿರುವುದು ನಮಗೆ ಸಂತಸ ತಂದಿದೆ. ಕುಟುಂಬದೊಂದಿಗೆ ಆಗಮಿಸಿ ದರ್ಶನ ಪಡೆದಿದ್ದು, ಸಂತಸದ ವಿಚಾರ. ನಮಗೆ ಕುಬಟೂರಿಗೆ ಬರುವುದೆಂದರೆ ಒಂದು ತರ ಖುಷಿ, ನಿಮ್ಮನ್ನೆಲ್ಲಾ ನೋಡಿ ನನಗೆ ಸಂತಸ ಆಯಿತು ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಜಾತ್ರೆಗೆ ಆಗಮಿಸಿದ ನಟ ಶಿವರಾಜ್ಕುಮಾರ್ ದಂಪತಿ ದೇವಿ ಎಲ್ಲರಿಗೂ ಆಶೀರ್ವಾದ ಮಾಡಲಿ ಎಂದು ನಟ ಶಿವರಾಜ್ಕುಮಾರ್, ಅವರ ಪತ್ನಿ ಗೀತ ಹಾಗೂ ಪೂರ್ಣಿಮರವರು ಹೇಳಿದರು. ಇದೇ ವೇಳೆ ನಟ ಶಿವರಾಜ್ ಕುಮಾರ್ ಅವರು ಜನುಮದ ಜೋಡಿಯ ಇವನ್ಯಾರ ಮಗನೂ ಹಾಡನ್ನು ಹಾಡಿದರು. ಪುನೀತ್ ರಾಜ್ ಕುಮಾರ್ ಅಭಿನಯದ ಗೊಂಬೆ ಹೇಳುತೈತೆ ಹಾಡನ್ನು ಹಾಡಿ ರಂಜಿಸಿದರು.
ಪ್ರಸಿದ್ಧ ಸಾಗರ ಮಾರಿಕಾಂಬೆ ದರ್ಶನ ಪಡೆದ ಶಿವಣ್ಣ ದಂಪತಿ:ಇನ್ನು,ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಸಾಗರದ ಮಾರಿಜಾತ್ರೆಗೆ ಕೂಡ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿದರು. ಸಾಗರದ ಮಾರಿಕಾಂಬೆ ದೇವಿ ದರ್ಶನ ಪಡೆದ ದಂಪತಿಗೆ ಮಾರಿಕಾಂಬೆ ದೇವಿ ಜಾತ್ರಾ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.
ನಟ ಶಿವರಾಜ್ ಕುಮಾರ್ ನೋಡಲು ನೂಕುನುಗ್ಗಲು:ಸಾಗರ ಮಾರಿಜಾತ್ರೆಗೆ ನಟ ಶಿವರಾಜ್ ಕುಮಾರ್ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಸಾಗರದ ಜನತೆಯು ಮಾರಿಕಾಂಬೆ ದೇವಾಲಯದ ಬಳಿ ಜಮಾವಣೆಗೊಂಡಿದ್ದರು. ಶಿವರಾಜ್ ಕುಮಾರ್ ತಮ್ಮ ವಾಹನದಿಂದ ಕೆಳಗೆ ಇಳಿಯಲು ಅರ್ಧ ತಾಸಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಅಲ್ಲದೆ ಪೊಲೀಸರು ಶಿವಣ್ಣ ದಂಪತಿಯನ್ನು ಹರಸಾಹಸ ಪಟ್ಟು ಮಾರಿಕಾಂಬೆ ದೇವಿ ಪೆಂಡಲ್ ಒಳಗೆ ಕರೆದುಕೊಂಡು ಬಂದರು. ಇವರಿಗೆ ಮಧು ಬಂಗಾರಪ್ಪ ಸಾಥ್ ನೀಡಿದರು. ಸಮಿತಿ ವತಿಯಿಂದ ಶಿವಣ್ಣ ದಂಪತಿಗೆ ಸನ್ಮಾನ ನಡೆಯಿತು.
ಇದನ್ನೂ ಓದಿ:ದೆಹಲಿ ಬಳಿಕ ಬಾಲಿವುಡ್ ಮಂದಿಗಾಗಿ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ ಸಿದ್ಧರಾದ ಸಿದ್ಧಾರ್ಥ್-ಕಿಯಾರಾ