ಹಸಿರುಮಕ್ಕಿ ಲಾಂಚ್‌ಗಳ ಸಂಚಾರ ಯಥಾಸ್ಥಿತಿಗೆ ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದಲ್ಲಿ ಲಾಂಚ್‌ಗಳ ಸೇವೆ ಮತ್ತೆ ಯಥಾಸ್ಥಿತಿಗೆ ಮರಳಿದೆ. ಮಲೆನಾಡು ಭಾಗದಲ್ಲಿ ಮಳೆಯಿಂದ ನೀರಿನ ಮಟ್ಟ ಏರಿಕೆಯಾಗಿದೆ. ಹಾಗಾಗಿ ಸ್ಥಗಿತಗೊಂಡಿದ್ದ ಹಸಿರುಮಕ್ಕಿ ಲಾಂಚ್ ಸೇವೆ ಮತ್ತೆ ಪುನಾರಂಭಗೊಂಡಿದೆ. ಹೌದು, ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕುಸಿತಗೊಂಡ ಕಾರಣ ಹಸಿರು ಮಕ್ಕಿ ಲಾಂಚ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಈಗ ನೀರಿನ ಮಟ್ಟ ಹೆಚ್ಚಳ ಆಗಿರುವುದರಿಂದ ಲಾಂಚ್ ಸೇವೆ ಯಥಾಸ್ಥಿತಿಗೆ ಮರಳಿದೆ. ಇದರಿಂದ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಯಥಾಸ್ಥಿತಿಗೆ ಸಿಗಂದೂರು ಲಾಂಚ್:ಸಿಗಂದೂರು ಲಾಂಚ್ ಸಂಚಾರ ಯಥಾಸ್ಥಿತಿಗೆ ಮರಳಿದೆ. ಶರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದರಿಂದ ಹೊಳೆಬಾಗಿಲು – ಕಳಸವಳ್ಳಿ ನಡುವೆ ಸಂಚರಿಸುತ್ತಿದ್ದ ಲಾಂಚ್‌ಗಳಲ್ಲಿ ವಾಹನಗಳನ್ನು ಹತ್ತಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಳೆಯಾಗದೆ ಹೋಗಿದ್ದರೆ ಲಾಂಚ್‌ಗಳ ಸಂಚಾರ ಕೂಡ ಬಂದ್ ಆಗುವ ಆತಂಕವಿತ್ತು. ಈಗ ಮಳೆಯಾಗಿದ್ದು, ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಇದರಿಂದ ಲಾಂಚ್‌ನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ಲಾಂಚ್ಗಳು ಮತ್ತೆ ಸಂಚಾರವನ್ನು ಆರಂಭಿಸಿವೆ.
ಹಸಿರುಮಕ್ಕಿ ಲಾಂಚ್ ಸೇವೆ ಪುನಾರಂಭ:ಸ್ಥಗಿತಗೊಂಡಿದ್ದ35 ದಿನಗಳ ಬಳಿಕ ಹಸಿರುಮಕ್ಕಿ ಲಾಂಚ್ ಸೇವೆ ಪುನಾರಂಭವಾಗುತ್ತಿದೆ. ಈ ಭಾಗದಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದರಿಂದ ಜೂನ್ 4 ರಂದು ಲಾಂಚ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ನೀರಿನ ಮಟ್ಟ ಏರಿಕೆಯಾಗಿದ್ದು, ಭಾನುವಾರ ಲಾಂಚ್ ಟ್ರಯಲ್ ರನ್ ನಡೆಸಲಾಗಿತ್ತು. ಇಂದಿನಿಂದ ಹಸಿರುಮಕ್ಕಿ ಲಾಂಚ್ ಸಂಚಾರ ಪುನಾರಂಭವಾಗಿದೆ. ಆರಂಭದಲ್ಲಿ ಲಘು ವಾಹನಗಳನ್ನು ಮಾತ್ರ ಲಾಂಚ್‌ನಲ್ಲಿ ಹತ್ತಿಸಲು ನಿರ್ಧರಿಸಲಾಗಿದೆ. ನೀರಿನ ಮಟ್ಟ ಇನ್ನಷ್ಟು ಹೆಚ್ಚಳವಾದ ನಂತರ ಬಸ್ ಸೇರಿದಂತೆ ಭಾರಿ ವಾಹನಗಳನ್ನು ಹತ್ತಿಸಲು ನಿರ್ಧರಿಸಲಾಗಿದೆ. ಒಟ್ಟಾರೆ ಲಾಂಚ್‌ಗಳಲ್ಲಿ ವಾಹನ ಸೇವೆ ಇಲ್ಲದೆ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಸಮಸ್ಯೆ ಅನುಭವಿಸುವಂತಾಗಿತ್ತು. ಆದರೆ ಈಗ ನೀರಿನ ಮಟ್ಟ ಏರಿಕೆ ಆಗಿರುವ ಕಾರಣ ಲಾಂಚ್‌ನಲ್ಲಿ ಲಘು ವಾಹನಗಳನ್ನು ಹತ್ತಿಸಲಾಗುತ್ತಿದೆ. ಇದರಿಂದ ಪ್ರವಾಸಿಗರು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಲಿಂಗನಮಕ್ಕಿ ಡ್ಯಾಂ ಹಿನ್ನೀರಿನಲ್ಲಿರುವ ಸಿಗಂದೂರಿಗೆ ತೆರಳಲು ಇರುವ ವ್ಯವಸ್ಥೆ ಈ ಲಾಂಚ್. ಸಿಗಂದೂರು ನಾಡಿನ ಪ್ರಸಿದ್ಧ ಧಾರ್ಮಿಕ ಸ್ಥಳವೂ ಆಗಿದ್ದು, ಶ್ರೀ ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಒಳನಾಡು ಸಾರಿಗೆ ಇಲಾಖೆಯಿಂದ ಲಾಂಚ್ ವ್ಯವಸ್ಥೆ ಇದ್ದು, ಪ್ರತಿದಿನ ಸಾವಿರಾರು ಜನರು ಹಾಗೂ ವಾಹನಗಳನ್ನು ಈ ಲಾಂಚ್‌ಗಳಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಕರೆದೊಯ್ಯಲಾಗುತ್ತದೆ.
ಇದನ್ನೂ ಓದಿ:ಮುಂಗಾರು ಮಳೆ ವಿಳಂಬ: ನಾಳೆಯಿಂದ ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಣೆ ಬಂದ್