ಶಿವಮೊಗ್ಗ:ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ದೇಶಿಯ ವಿದ್ಯಾ ಶಾಲೆಯ ಹೈಸ್ಕೂಲ್ನ 1974-75ರ ಶೈಕ್ಷಣಿಕ ಸಾಲಿನಲ್ಲಿ ಸಿದ್ಧಾರ್ಥರವರು ಹತ್ತನೆ ತರಗತಿಯನ್ನು ಓದಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಎಂಟು ಮತ್ತು ಒಂಭತ್ತನೆ ತರಗತಿಯನ್ನು ಚಿಕ್ಕಮಗಳೂರಿನಲ್ಲಿ ಓದಿ, ನಂತ್ರ ಹತ್ತನೇ ತರಗತಿಗೆ ಶಿವಮೊಗ್ಗಕ್ಕೆ ಬಂದಿದ್ದರು. ತಮ್ಮ ಸಂಬಂಧಿಕರ ಮನೆಯಲ್ಲಿಯೇ ಉಳಿದುಕೊಂಡು ಅವರು ಹತ್ತನೆ ತರಗತಿಯನ್ನು ಮುಗಿಸಿದ್ದಾರೆ. ಹತ್ತನೇ ತರಗತಿಯಲ್ಲಿ 299 ಅಂಕಗಳನ್ನು ಗಳಿಸಿ, ಬಳಿಕ ಪಿಯುಸಿ ವಿದ್ಯಾಭ್ಯಾಸಕ್ಕೆ ಮತ್ತೆ ಚಿಕ್ಕಮಗಳೂರಿಗೆ ಹೋಗಿದ್ದರು.
ಸಿದ್ಧಾರ್ಥರವರು ಡಿವಿಎಸ್ ಶಾಲೆಯಲ್ಲಿ ಓದಿದ್ದರು ಎಂದು ಆಡಳಿತ ಮಂಡಳಿ ಹೇಳಿದೆ. ಇವರು ಶಾಲೆಗೆ ದಾಖಲಾದ ಬಗ್ಗೆ ಹಾಗೂ ಅವರು ತೆಗೆದುಕೊಂಡ ಅಂಕದ ಬಗ್ಗೆ ಶಾಲೆಯಲ್ಲಿ ದಾಖಲಾತಿ ಲಭ್ಯವಿದೆ. ಸಿದ್ದಾರ್ಥ ಅವರೇ ಸಹಿ ಮಾಡಿದ ದಾಖಲಾತಿಗಳಿವೆ. ಇಂತಹ ಓರ್ವ ಮಹಾನ್ ವ್ಯಕ್ತಿ ತಮ್ಮ ಶಾಲೆಯಲ್ಲಿ ಓದಿದ್ದು ನಮಗೆ ಹೆಮ್ಮೆಯ ಸಂಗತಿ. ಈಗ ಸಿದ್ಧಾರ್ಥರವರ ಧಾರುಣ ಅಂತ್ಯ ನಿಜಕ್ಕೂ ಅಘಾತಕಾರಿಯಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬದವರಿಗೆ ಭಗವಂತ ನೀಡಲಿ ಎನ್ನುತ್ತಾರೆ ಡಿವಿಎಸ್ ಉಪ ಪ್ರಾಚಾರ್ಯರಾದ ಲಕ್ಷಣ್.
ಶಿವಮೊಗ್ಗದ ಡಿವಿಎಸ್ ಕಾಲೇಜು ಇನ್ನು ರಾಷ್ಟ್ರಕವಿ ಕುವೆಂಪುರವರ ಸಮಾಧಿ ಇರುವ ಕುಪ್ಪಳ್ಳಿಯ ಕವಿಶೈಲಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರಕುವಂತೆ ಮಾಡಿದ್ದುಇದೇ ಸಿದ್ದಾರ್ಥರವರು. ಕುವೆಂಪುರವರ ಮಗ ಪೂರ್ಣಚಂದ್ರ ತೇಜಸ್ವಿ ಅವರ ಆದೇಶದ ಮೇರೆಗೆ ಸಿದ್ಧಾರ್ಥರವರು ಸುಮಾರು 50 ಲಕ್ಷ ರೂ.ಖರ್ಚು ಮಾಡಿ ಕಲ್ಲುಗಳನ್ನು ತರಿಸಿ, ಕವಿಶೈಲವನ್ನು ಉತ್ತಮವಾಗಿ ರೂಪಗೊಳ್ಳುವಂತೆ ಮಾಡಿದ್ದರು. ಇದನ್ನು ನಾನು ಮಾಡಿದ್ದು ಎಂದು ಯಾರಿಗೂ ಹೇಳಬೇಡಿ ಎಂದು ಹೇಳುವ ಮೂಲಕ ಪ್ರಚಾರದಿಂದ ದೂರ ಉಳಿದಿದ್ದರು.
ಅಲ್ಲದೇ ತೀರ್ಥಹಳ್ಳಿ ತಾಲೂಕು ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಬ್ಲಂಡ್ ಬ್ಯಾಂಕ್ ನಿರ್ಮಾಣ ಮಾಡಿಕೊಟ್ಟಿದ್ದು ಇವರೆ, ಇವರ ಜನನ ಇದೇ ಜೆ.ಸಿ ಆಸ್ಪತ್ರೆಯಲ್ಲಿ ಆಗಿತ್ತು. ಇವರ ತಾಯಿ ತೀರ್ಥಹಳ್ಳಿ ತಾಲೂಕಿನ ಹೀರೆ ತೋಟದವರಾಗಿದ್ದ ಕಾರಣ ಸಿದ್ಧಾರ್ಥರವರಿಗೆ ಶಿವಮೊಗ್ಗ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ ಸಿದ್ಧಾರ್ಥರವರ ಸಂಬಂಧಿ ರಮೇಶ್ ಹೆಗ್ಡೆ